

ಬೆಂಗಳೂರು: ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಮುಖವಾಗಿ ದ್ವಿಭಾಷಾ ನೀತಿ ವಿಚಾರವಾಗಿ ಪ್ರಕಟಿಸಿರುವ ಶಿಾರಸುಗಳಲ್ಲಿನ ಗೊಂದಲಗಳನ್ನು ಬಗೆಹರಿಸುವಂತೆ ಪಾಲಕರು, ಪಾಲುದಾರರರು, ಶಿಕ್ಷಣ ಸಂಘಟನೆಗಳು ಆಗ್ರಹಿಸಿವೆ.
ವರದಿ ಸ್ವೀಕರಿಸಿದ ಬಳಿಕ ಸರ್ಕಾರವು ಪ್ರಕಟಿಸಿರುವ ಶಿಾರಸುಗಳಲ್ಲಿ ರಾಜ್ಯದಲ್ಲಿ ಕನ್ನಡ/ಮಾತೃಭಾಷೆ ಹಾಗೂ ಇಂಗ್ಲಿಷ್ ಕಲಿಸಬೇಕು ಎಂಬ ಅಂಶಗಳನ್ನು ಪರಿಗಣಿಸಿದೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿಯೇ ಕನ್ನಡ, ತಮಿಳು, ತೆಲುಗು, ಉರ್ದು ಮತ್ತು ಮರಾಠಿ ಮಾಧ್ಯಮ ಶಾಲೆಗಳನ್ನು ನಡೆಸಲಾಗುತ್ತಿದೆ. ಪ್ರಥಮ ಭಾಷೆಗಳ ಜತೆಗೆ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಬೋಧಿಸಲಾಗುತ್ತಿದೆ.
ಒಂದು ವೇಳೆ ದ್ವಿಭಾಷಾ ಮಾಧ್ಯಮ ಜಾರಿಯಾದಲ್ಲಿ ಉದಾಹರಣೆಗೆ ಕನ್ನಡ/ಇಂಗ್ಲಿಷ್, ತಮಿಳು/ಇಂಗ್ಲಿಷ್, ತೆಲುಗು/ಇಂಗ್ಲಿಷ್, ಉರ್ದು,ಮರಾಠಿ/ಇಂಗ್ಲಿಷ್ ಕಲಿತರೆ ಕನ್ನಡ ಕಲಿಯಲು ಅವಕಾಶವೇ ಇರುವುದಿಲ್ಲ ಎಂಬ ವಾದವನ್ನು ಖಾಸಗಿ ಶಾಲೆಗಳು ಮತ್ತು ಕೆಲವು ಶಿಕ್ಷಣ ತಜ್ಞರು ವಾದಿಸುತ್ತಿದ್ದಾರೆ.
ಸರ್ಕಾರವು ಸ್ಪಷ್ಟತೆ ನೀಡಲಿ:
ದ್ವಿಭಾಷಾ ಮಾಧ್ಯಮ ವಿಚಾರವಾಗಿ ಸರ್ಕಾರವು ಸ್ಪಷ್ಟತೆ ನೀಡಿದರೆ ಶಿಕ್ಷಣ ಸಂಸ್ಥೆಗಳು, ಪಾಲಕ/ಪೋಷಕರು, ವಿದ್ಯಾರ್ಥಿಗಳು ಮತ್ತು ಬೇರೊಂದು ರಾಜ್ಯದಿಂದ ಇಲ್ಲಿಗೆ ವಲಸೆ ಬಂದಿರುವ ಕಾರ್ಮಿಕರು ಸೇರಿದಂತೆ ಇಡೀ ಸಮೂಹಕ್ಕೆ ಸ್ಪಷ್ಟತೆ ಸಿಗಲಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್.
ವರದಿಯನ್ನು ಸಾರ್ವಜನಿಕ ಡೊಮೈನ್‌ಗೆ ಬಿಡಲಿ
ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯದ ಶಿಕ್ಷಣ ನೀತಿ (ಎಸ್‌ಇಪಿ) ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಮುಖ ಶಿಾರಸು ಅಂಶಗಳನ್ನು ಮಾತ್ರ ಮಧ್ಯಮಗಳಲ್ಲಿ ಪ್ರಕಟವಾಗಿದೆ. ಪೂರ್ಣ ಮಾಹಿತಿ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಮುಕ್ತವಾಗಿ ಚರ್ಚಿಸಲು ಅನುಕೂಲವಾಗುವಂತೆ ವರದಿಯ ಪ್ರತಿಯನ್ನು ಸಾರ್ವಜನಿಕ ಡೊಮೈನ್‌ನಲ್ಲಿ ಪ್ರಕಟಿಸಬೇಕೆಂದು ಮಾಜಿ ಎಂಎಲ್‌ಸಿ ಅರುಣ್ ಶಹಾಪೂರ ಒತ್ತಾಯಿಸಿದ್ದಾರೆ.
ಸರ್ಕಾರವು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿರುವ ಅಂಶಗಳು ಸ್ಪಷ್ಟನೆ ಹೊಂದಿರದ ಕಾರಣ ಆ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನಾವು ನೀಡುವುದಿಲ್ಲ. ಮೂಲ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಬಳಿಕ ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದ ಪಾಲುದಾರರ ಮಧ್ಯೆ ಚರ್ಚೆ ನಡೆಯಬೇಕು.
ಈಗ ಸರ್ಕಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ರಾಜ್ಯ ಶಿಕ್ಷಣ ನೀತಿಯ ಅಂಶಗಳು ರಾಜಕೀಯ ನಿರೂಪಣೆ ರೂಪಿಸುವ ಹುನ್ನಾರ ಅಡಗಿದೆ. ರಾಜ್ಯದ ಶಿಕ್ಷಣ ನೀತಿಯನ್ನು ಸಮಗ್ರ ಚರ್ಚೆ ಅಗತ್ಯವಾಗಿದೆ. ಈ ರೀತಿ ಬಹಿರಂಗಪಡಿಸಿದ ತಿರುಳಿನ ಆಧಾರದಲ್ಲಿ ಚರ್ಚೆ ಅನಪೇಕ್ಷಿತ ವಾತಾವರಣ ನಿರ್ಮಾಣ ಮಾಡುತ್ತದೆ.
ರಾಜ್ಯದ ಹಿತ, ನೈಜ ಶೈಕ್ಷಣಿಕ ಹಿತ, ವಿದ್ಯಾರ್ಥಿ ಹಿತದ ಪಾಲನೆ, ಯಾವುದೇ ವೈಚಾರಿಕ ಗೌಪ್ಯ ಕಾರ್ಯಸೂಚಿ ಇಲ್ಲದ, ರಾಜಕೀಯ ರಾಗದ್ವೇಶ ಹೊಂದಿರದ ರಾಜ್ಯದ ಶಿಕ್ಷಣ ನೀತಿ ರೂಪಿತಗೊಂಡ ಕುರಿತು ಪೂರಕ ವಾತಾವರಣ ಮೂಡಿಸುವ ಕೆಲಸ ಸರ್ಕಾರ ಮಾಡಲಿ, ಪಾರದರ್ಶಕತೆ ಸರ್ಕಾರದ ನೀತಿಯಾಗಲಿ ಎಂದು ಆಗ್ರಹಿಸಿದ್ದಾರೆ.
ದ್ವಿಭಾಷಾ ಮಾಧ್ಯಮ ಜಾರಿ ಸರ್ಕಾರಕ್ಕಿರುವ ಸವಾಲುಗಳು
ದೇಶ ಮತ್ತು ಜಗತ್ತಿನ ಮಟ್ಟಿಗೆ ಬೆಂಗಳುರು ಮಾರುಕಟ್ಟೆ, ಶಿಕ್ಷಣ, ಉದ್ಯೋಗ ಸೇರಿ ಹಲವು ವಿಚಾರವಾಗಿ ಬೆಂಗಳೂರು ಜಾಗತಿಕವಾಗಿ ಮನ್ನಣೆ ಗಳಿಸಿದೆ. ಈ ವಿಚಾರದಿಂದಲೇ ವಲಸೆ ಕಾರ್ಮಿಕರ ಸಂಖ್ಯೆ ಬೆಳೆಯುತ್ತಲೇ ಇದೆ.
ಇದೇ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಗಳು ಜಾಸ್ತಿಯಾಗುತ್ತಿವೆ. ಇವುಗಳಲ್ಲಿ ಭಾಗಶಃ ಸಂಸ್ಥೆಗಳು ರಾಜಕೀಯ ಪ್ರತಿನಿಧಿಗಳು ಮತ್ತು ಅನ್ಯ ರಾಜ್ಯಗಳ ವ್ಯಕ್ತಿಗಳು ಸಂಸ್ಥೆಗಳ ಮಾಲೀಕರಾಗಿದ್ದಾರೆ.
ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ವರ್ಗದವರು ಕೂಡ ಹಿಂದಿ/ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು, ಕನ್ನಡ ಪ್ರೇಮ ಅಷ್ಟಕಷ್ಟೆ ಎನ್ನುವಂತಿದೆ.
ಇಂತಹ ಪರಿಸ್ಥಿತಿಯಲ್ಲಿ ದ್ವಿಭಾಷಾ ಮಾಧ್ಯಮ ಅದರಲ್ಲಿಯೂ ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಅನುಷ್ಠಾನ ಮಾಡುವುದು ಸರ್ಕಾರಕ್ಕೆ ಸವಾಲಾಗಿದೆ.
ವರದಿ ಜಾರಿಗೆ ಮುಂದಿನ ಹಂತಗಳು
- ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ವರದಿ ಅನುಷ್ಠಾನ ಬಗ್ಗೆ ಸರ್ಕಾರ ನಿರ್ಧರಿಸಬೇಕಿದೆ
- ಅನುಷ್ಠಾನಕ್ಕೆ ಸಮಿತಿ ರಚನೆ ರಚಿಸಿ ನಿಯಮಗಳನ್ನು ರೂಪಿಸಬೇಕಿದೆ
- ಅನುಷ್ಠಾನ ಮಾಡಬಹುದಾದ ಮತ್ತು ಸಾಧ್ಯವಾಗದ ಅಂಶಗಳನ್ನು ಪರಿಗಣನೆ
- ಪಠ್ಯಕ್ರಮಗಳನ ರಚನೆ
- ಸರ್ಕಾರದ ಗೆಜೆಟೆಡ್ ಆದೇಶ ಪ್ರಕಟವಾದ ನಂತರ ಅಧಿಕೃತವಾಗಿ ನೀತಿಯು ಜಾರಿಗೊಳ್ಳಲಿದೆ
ಪಾಲಕರ ಪ್ರಶ್ನೆಗಳೇನು? - ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ಹಿಂದಿಯನ್ನು ರಾಷ್ಟ್ರಭಾಷೆ ಎಂದೇ ಬಿಂಬಿಸಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿವೆ. ಆದರೆ, ದಿನನಿತ್ಯದ/ಉದ್ಯೋಗದ ವಿಚಾರದಲ್ಲಿ ಹಿಂದಿಯಿಂದ ಆಗುವ ಅನುಕೂಲ ಅಷ್ಟಕಷ್ಟೇ ಇದೆ - ಹಿಂದಿಯನ್ನು ಕೇವಲ 5ರಿಂದ 10ನೇ ತರಗತಿವರೆಗೆ ಮಾತ್ರ ಬೋಧಿಸುತ್ತಿರುವುದರಿಂದ ಆರಂಭ ಹಾಗೂ ಅಂತ್ಯದಲ್ಲಿ ಅವಶ್ಯಕ ಇಲ್ಲ. ಮಧ್ಯದಲ್ಲಿ ಮಾತ್ರ ಬಂದು ಹೋಗಲಿದೆ. - ಉನ್ನತ ಶಿಕ್ಷಣದಲ್ಲಿಯೂ ಹಿಂದಿಯಿಂದ ಉಪಯೋಗವಾಗುತ್ತಿಲ್ಲ. ಹೀಗಾಗಿ, ಹಿಂದಿಯನ್ನು ರಾಜ್ಯದಲ್ಲಿ ಅಧಿಕೃತವಾಗಿ ಸರ್ಕಾರ ಏಕೆ ಕಲಿಸಬೇಕು? - ಹಿಂದಿಯನ್ನು ಪ್ರಧಾನ ಭಾಷೆಯಾಗಿ ಕಲಿತ ರಾಜ್ಯದವರೇ ಕೆಲಸ ಅರಸಿ ದಕ್ಷಿಣ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನೋಡುವುದಾದರೆ ಅವರೇ ನಮ್ಮ ಭಾಷೆಯನ್ನು ಕಲಿಯಬೇಕು
ಹಲವು ವರ್ಷಗಳ ಬೇಡಿಯಾದ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಮಾಡಬೇಕು ಮತ್ತು ಆರ್‌ಟಿಇಯನ್ನು 18 ವರ್ಷದವರಿಗೆ ವಿಸ್ತರಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸಿವೆ. ವರದಿ ಸಂಪೂರ್ಣವಾಗಿ ಕೈಸೇರದ ಕಾರಣ ದ್ವಿಭಾಷಾ ನೀತಿಯನ್ನು ಸರ್ಕಾರವು ಸ್ಪಷ್ಟತೆ ನೀಡಬೇಕು. - ಬಿ.ಎನ್. ಯೋಗಾನಂದ, ಪಾಲಕ ಸಂಘಟನೆಗಳ ಅಧ್ಯಕ್ಷ