ಎಸ್‌ಇಪಿ: ಎನ್‌ಸಿಇಆರ್‌ಟಿ ಪಠ್ಯಕ್ರಮ ಕೈಬಿಟ್ಟರೆ ರಾಜ್ಯಕ್ಕೇ ನಷ್ಟ

NCERT
Published on

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ಪಠ್ಯ ಬದಲಾಗಿ ರಾಜ್ಯದ್ದೇ ಪಠ್ಯಕ್ರಮ ರಚನೆಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಶಿಪಾರಸು ಮಾಡಿರುವುದು ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿರುವವರಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ.

ಪ್ರಸ್ತುತ ರಾಜ್ಯದಲ್ಲಿ 5ರಿಂದ 12ನೇ ತರಗತಿವರೆಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಭಾಷಾಂತರ ಮಾಡಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಎಸ್‌ಇಪಿಯಲ್ಲಿ ರಾಜ್ಯದ್ದೇ ಪಠ್ಯಕ್ರಮ ಸಿದ್ಧಪಡಿಸಬೇಕು ಎಂದು ಹೇಳಿದೆ. ಇದರಿಂದ ರಾಜ್ಯದ ಮಟ್ಟಿಗೆ ಅನುಕೂಲವಾದರೂ ಅಖಿಲ ಭಾರತ ಮಟ್ಟದ ವಿಚಾರದಲ್ಲಿ ರಾಜ್ಯದ ಮಕ್ಕಳಿಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ, ಪಾಲಕ/ಪೋಷಕರು, ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳು ಒಳಗೊಂಡಂತೆ ಹಲವು ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

ಪಠ್ಯಕ್ರಮದ ಕುರಿತು ಆತಂಕವೇಕೆ?

ದೇಶದ ಅತ್ಯುನ್ನತ ಹುದ್ದೆಗೆ ಪರೀಕ್ಷೆ ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳು, ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ನೀಟ್, ಇಂಜಿನಿಯರಿಂಗ್ ಸೇರಿ ಇನ್ನಿತರ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಾದ ಸಿಇಟಿ, ಗೇಟ್, ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಹಾಗೂ ಇನ್ನಿತರ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ ಮೇನ್ಸ್ ಹಾಗೂ ಅಡ್ವಾನ್ಸಡ್ ಒಳಗೊಂಡಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎನ್‌ಸಿಇಆರ್‌ಟಿ ಪಠ್ಯಗಳನ್ನು ಅನುಸರಿಸಲಾಗುತ್ತಿದೆ.

ಶಾಲಾ ಹಂತದಲ್ಲಿಯೇ ಓದದಿದ್ದರೆ ಹೇಗೆ?

ಎನ್‌ಸಿಇಆರ್‌ಟಿ ಪಠ್ಯವನ್ನು ಶಾಲಾ ಹಂತದಲ್ಲಿಯೇ ಓದಿ ಮನನ ಮಾಡಿಕೊಂಡರೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗೆ ಅನುಕೂಲ ಮತ್ತು ಸುಲಭವಾಗಲಿದೆ. ಆದರೆ, ಎಸ್‌ಇಪಿ ಪ್ರಕಾರ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡರೆ ವಿಭಿನ್ನ ಪಠ್ಯಕ್ರಮ ಓದಿದರೆ ಹುದ್ದೆಗಳನ್ನು ಪಡೆಯುವಲ್ಲಿ ರಾಜ್ಯದ ಅಭ್ಯರ್ಥಿಗಳು ಹಿಂದುಳಿಯಬಹುದು ಎಂಬ ಆತಂಕ ಎದುರಾಗಿದೆ.

6ನೇ ತರಗತಿಯಿಂದ 12ನೇ ತರಗತಿಯ ಶಾಲಾ ಅವಧಿಯ ಪಾಠಗಳು ಹೆಚ್ಚು ಜ್ಞಾಪಕದಲ್ಲಿ ಉಳಿಯಲಿವೆ. ಆದರೆ, ಸರ್ಕಾರದ ಕ್ರಮದಿಂದ ಒಟ್ಟಾರೆ ಬಾಲ್ಯದಲ್ಲಿಯೇ ಇರುವ ಅವಕಾಶವನ್ನು ತಪ್ಪಿಸಿದಂತಾಗಲಿದೆ.

ರಾಜ್ಯ ಪಠ್ಯಕ್ರಮ ಮಾಡಿದರೆ ಸಮಸ್ಯೆ ಏನು?

ರಾಜ್ಯಪಠ್ಯಕ್ರಮ ರಚನೆ ಮಾಡುವುದರಿಂದ ರಾಷ್ಟ್ರದ ವಿಚಾರಗಳನ್ನು ಕೈಬಿಡುವುದಿಲ್ಲ. ಅವುಗಳನ್ನು ಸಹ ನೋಧನೆ ಮಾಡುತ್ತಾರೆ. ಆದರೆ, ಎನ್‌ಸಿಇಆರ್‌ಟಿ ಮತ್ತು ಡಿಎಸ್‌ಇಆರ್‌ಟಿ ಪಠ್ಯಕ್ರಮಗಳನ್ನು ವಿಭಿನ್ನವಾಗಿದ್ದು, ಪ್ರಶ್ನೋತ್ತರ ವಿಷಯಗಳು, ಪಠ್ಯಗಳು ವಿಭಿನ್ನವಾಗಿದ್ದರೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಬಹುದು.

ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆಯಾಗಿ ಅನ್ಯಾಯವಾದಲ್ಲಿ ಕೊನೆಗೆ ಸರ್ಕಾರವನ್ನೇ ವಿದ್ಯಾರ್ಥಿಗಳು ಬೈದುಕೊಳ್ಳುವ ಜತೆಗೆ ಅವಕಾಶ ಕೈತಪ್ಪಲಿದೆ. ಇಂತಹ ಅನಾಹುತಗಳಿಗೆ ಸರ್ಕಾರ ಕೈಜೋಡಿಸಬಾರದು ಎಂಬ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net