

ಮುಂಬೈ: ಕರೊನಾ ಎಫೆಕ್ಟ್ ಷೇರುಪೇಟೆ ಮೇಲೆ ಮುಂದುವರಿದಿದ್ದು, ಸೋಮವಾರ ವಹಿವಾಟು ಆರಂಭವಾಗುತ್ತಲೇ ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 600 ಅಂಶ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನಿಫ್ಟಿ 9,000 ಅಂಶಕ್ಕಿಂತ ಕೆಳಕ್ಕೆ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರಿ, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿರುವುದು ಇದಕ್ಕೆ ಕಾರಣ.
ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 30,541.97ಕ್ಕೆ ಕುಸಿದ ಸೆನ್ಸೆಕ್ಸ್ ಬಳಿಕ ಅಲ್ಪ ಚೇತರಿಸಿಕೊಂಡು ಮತ್ತೆ 581.75 ಅಂಶ ಅಥವಾ ಶೇಕಡ 1.87 ಕುಸಿತ ಕಂಡು 30,577.877ರಲ್ಲಿ ವಹಿವಾಟು ಮುಂದುವರಿಸಿದೆ. ನಿಫ್ಟಿ 169.85 ಅಂಶ ಕುಸಿದು 8,942.05ರಲ್ಲಿ ವಹಿವಾಟು ನಡೆಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಶೇಕಡ 8 ನಷ್ಟ ಅನುಭವಿಸಿದರೆ, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಮಾರುತಿ, ಒಎನ್ಜಿಸಿ, ಟೈಟಾನ್, ಬಜಾಜ್ ಆಟೋ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಭಾರ್ತಿ ಏರ್ಟೆಲ್, ಎಲ್ಆ್ಯಂಡ್ಟಿ, ಇನ್ಫೋಸಿಸ್, ಎನ್ಟಿಪಿಸಿ ಷೇರುಗಳು ಲಾಭಗಳಿಸಿವೆ.
ಹಿಂದಿನ ವಹಿವಾಟಿನ ದಿನದಲ್ಲಿ ಸೆನ್ಸೆಕ್ಸ್ 1,265.66 ಅಂಶ ಏರಿಕೆಯಾಗಿದ್ದು 31,159.62ರಲ್ಲಿ ವಹಿವಾಟು ಮುಗಿದಿತ್ತು. ಇದೇ ರೀತಿ ನಿಫ್ಟಿ 363.15 ಅಂಶ ಏರಿಕೆ ಕಂಡು 9,111.90 ಅಂಶದಲ್ಲಿ ವಹಿವಾಟು ಕೊನೆಗೊಂಡಿತ್ತು. (ಏಜೆನ್ಸೀಸ್)