ಲಾಭದಲ್ಲಿ ಷೇರು ಮಾರುಕಟ್ಟೆ: ಮೊದಲ ಬಾರಿಗೆ 25,000 ದಾಟಿದ ನಿಫ್ಟಿ, ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್!

BSE
Published on

ಮುಂಬೈ: ಭಾರತದ ಷೇರುಪೇಟೆ ಗುರುವಾರ (ಆಗಸ್ಟ್ 1) ಬೆಳಗ್ಗೆ 9.30ಕ್ಕೆ ಸೆನ್ಸೆಕ್ಸ್ 334.83 ಅಂಕಗಳ ಏರಿಕೆಯೊಂದಿಗೆ 82,076.17 ಅಂಕಗಳಲ್ಲಿ ವಹಿವಾಟು ಆರಂಭಿಸಿದ್ದು, ಎನ್‌ಎಸ್‌ಇ ನಿಫ್ಟಿ 104.70 ಪಾಯಿಂಟ್‌ಗಳ ಏರಿಕೆ ಕಂಡು 25,055.85 ಪಾಯಿಂಟ್‌ಗಳಿಗೆ ತಲುಪಿದೆ.

ಷೇರು ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಿಫ್ಟಿ 25 ಸಾವಿರ ಗಡಿ ದಾಟಿದೆ. ಸೆನ್ಸೆಕ್ಸ್​ ಕೂಡ ಸಾರ್ವಕಾಲಿಕ ಎತ್ತರದಲ್ಲಿದೆ. ತಜ್ಞರ ಪ್ರಕಾರ, ಭಾರತೀಯ ಮಾರುಕಟ್ಟೆಗಳು ಅನುಕೂಲಕರವಾದ ಜಾಗತಿಕ ಮಾರುಕಟ್ಟೆ ಪ್ರವೃತ್ತಿಯಿಂದ ಪ್ರಯೋಜನ ಪಡೆದುಕೊಂಡಿವೆ. ಬಹುತೇಕ ಮಾರುಕಟ್ಟೆ ಸೂಚ್ಯಂಕಗಳು ಉತ್ತಮ ಆರಂಭಿಕ ವಹಿವಾಟುಗಳನ್ನು ಹೊಂದಿವೆ.

ಮಾರುತಿ ಸುಜುಕಿ, ಕೋಲ್​ ಇಂಡಿಯಾ, ಹಿಂಡಾಲ್ಕೊ, ಜೆಎಸ್​ಡಬ್ಲ್ಯು ಸ್ಟೀಲ್, ಟಾಟಾ ಮೋಟರ್ಸ್​ ಮತ್ತು ಪವರ್ ಗ್ರಿಡ್ ಇತ್ಯಾದಿಗಳು ಉತ್ತಮ ಬೆಳವಣಿಗೆಯನ್ನು ತೋರಿಸುತ್ತಿವೆ. ಇನ್ನೊಂದೆಡೆ ಮಹೀಂದ್ರಾ ಅಂಡ್ ಮಹೀಂದ್ರಾ, ಬಿಪಿಸಿಎಲ್​, ಇನ್ಫೋಸಿಸ್​, ಅಲ್ಟ್ರಾಟೆಕ್​ ಸೀಮೆಂಟ್​, ಹೀರೋ ಮೋಟೋಕಾರ್ಪ್​, ಸನ್​ ಫಾರ್ಮ ಮತ್ತು ಈಚರ್​ ಮೋಟರ್ಸ್​ ಷೇರುಗಳು ಷೇರುಗಳು ನಷ್ಟದಲ್ಲಿ ವಹಿವಾಟಾಗುತ್ತಿವೆ.

ಕಳೆದ ಆರು ತಿಂಗಳಲ್ಲಿ ನಿಫ್ಟಿ 50 ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಆದರೆ ಅದೇ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಕೂಡ ಶೇ. 14 ಕ್ಕಿಂತ ಹೆಚ್ಚು ಗಳಿಸಿದೆ. ಜುಲೈ 23 ರಂದು ಕೇಂದ್ರ ಸರ್ಕಾರದ ಬಜೆಟ್ ಘೋಷಣೆಯ ನಂತರ ಭಾರತೀಯ ಮಾರುಕಟ್ಟೆಗಳು ಉತ್ತಮ ವಹಿವಾಟಿನಲ್ಲಿವೆ.

ಜಾಗತಿಕ ಮಾರುಕಟ್ಟೆಗಳು ಮಿಶ್ರ ಫಲಿತಾಂಶಗಳನ್ನು ತೋರಿಸಿವೆ. ಏಷ್ಯಾ ಮಾರುಕಟ್ಟೆಗಳು ಹೆಚ್ಚಾಗಿ ಅಮೆರಿಕದ ವಾಲ್ ಸ್ಟ್ರೀಟ್‌ನ ಲಾಭಗಳನ್ನು ಟ್ರ್ಯಾಕ್ ಮಾಡುತ್ತಿದೆ. ಡೌ ಜೋನ್ಸ್ ಮತ್ತು ಎಸ್ & ಪಿ 500 ಅನುಕ್ರಮವಾಗಿ ಶೇ. 0.24 ಮತ್ತು ಶೇ. 1.58 ರಷ್ಟು ಏರಿದರೆ, ನಾಸ್ಡಾಕ್ ಶೇ. 2.64 ರಷ್ಟು ಏರಿತು. ಯುಎಸ್​ ಡಾಲರ್ ಮತ್ತು ಟ್ರೆಸರಿ ಯೀಲ್ಡ್​, ಫೆಡ್ ಸಭೆಯ ನಂತರ ಕುಸಿತ ಕಂಡವು. ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 81.51 ಡಾಲರ್​ಗೆ ಏರಿಕೆ ಕಂಡಿದೆ. ಶೇ. 0.8 ರಷ್ಟು ಏರಿಕೆಯಾಗಿದ್ದು, ಹಿಂದಿನ ಸೆಷನ್‌ನಿಂದ ತನ್ನ ಲಾಭವನ್ನು ಮುಂದುವರೆಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net