

ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಮುಂಬೈಗೆ ತೆರಳಿದ್ದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ಗೆ ದೂಡಿದ್ದಾರೆಂದು ಆರೋಪಿಸಿ ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೆ ಅವರು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಸುಶಾಂತ್ ಸಾವಿಗೆ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಸುಶಾಂತ್ ತಂದೆ ಪಟನಾದಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ವಿನಯ್ ತಿವಾರಿ ಅವರು ಬಿಹಾರ ಪೊಲೀಸ್ ತಂಡದೊಂದಿಗೆ ತನಿಖೆಗಾಗಿ ಮುಂಬೈಗೆ ತೆರಳಿದ್ದಾಗ ಈ ಹೈಡ್ರಾಮ ನಡೆದಿದೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಡಿಜಿಪಿ ಪಾಂಡೆ ಅವರು ತಿವಾರಿ ಅವರು ಇಂದು ಪಟನಾದಿಂದ ಮುಂಬೈಗೆ ತೆರಳಿದರು. ಕರ್ತವ್ಯದ ಮೇಲೆ ಪೊಲೀಸ್ ತಂಡದೊಂದಿಗೆ ತೆರಳಿದ ಅವರನ್ನು ಮುಂಬೈ ಅಧಿಕಾರಿಗಳು ಭಾನುವಾರ ರಾತ್ರಿ 11 ಗಂಟೆಗೆ ತಡೆದು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಮನವಿ ಮಾಡಿದ ಬಳಿಕವೂ ತಿವಾರಿ ಅವರಿಗೆ ಉತ್ತಮ ವಸತಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಬದಲಾಗಿ ತಿವಾರಿ ಅವರು ಗೋರೆಗಾಂವ್ ಅತಿಥಿ ಗೃಹದಲ್ಲೇ ತಂಗಿದ್ದರು ಎಂದು ಡಿಜಿಪಿ ಪಾಂಡೆ ಹೇಳಿದ್ದಾರೆ.
ಅಂದಹಾಗೆ ಸುಶಾಂತ್ (34) ಜೂನ್ 24ರಂದು ಮುಂಬೈನ ತಮ್ಮ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಸಾವಿನ ಕುರಿತು ಸಾಕಷ್ಟು ತನಿಖೆ ಹಾಗೂ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಜುಲೈ ತಿಂಗಳ ಅಂತ್ಯದಲ್ಲಿ ಸುಶಾಂತ್ ತಂದೆ ಪಟನಾದಲ್ಲಿ ಎಫ್ಐಆರ್ ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದರು.
ಇದರ ತನಿಖೆ ನಡೆಸಲು ಪೂರ್ವ ಪಟನಾದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ತಿವಾರಿ ಅವರನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಮುಂಬೈಗೆ ತೆರಳಿದ್ದರು. ಆದರೆ, ಕರೊನಾ ವೈರಸ್ ಹೆಸರಲ್ಲಿ ಹೊರಗಿನಿಂದ ಬಂದ ಅವರನ್ನು ಬಲವಂತವಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತ ಮುಂಬೈ ಪೊಲೀಸರು ಸುಶಾಂತ್ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಈವರೆಗೂ ಸುಶಾಂತ್ ಕುಟುಂಬ ಹಾಗೂ ಚಿತ್ರರಂಗದ ಅನೇಕರು ಸೇರಿದಂತೆ ಸುಮಾರು 40 ಮಂದಿಯ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)