

ಶಿವಮೊಗ್ಗ: ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿಯಿಂದ ಆ.20ರ ಬೆಳಗ್ಗೆ 11ಕ್ಕೆ ಹಿರಿಯ ಗುತ್ತಿಗೆದಾರರು ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಜಿ.ಎಂ.ಜಗದೀಶ್ ಗುಡುಮಗಟ್ಟೆ ಹೇಳಿದರು.
ಗೋಪಾಲ ಗೌಡ ಬಡಾವಣೆಯ ಅಗಮುಡಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುವ ಸಮಾರಂಭದ ವೇಳೆ ಗುತ್ತಿಗೆದಾರರ ಸಮಸ್ಯೆಗಳು, ಪರಿಹಾರೋಪಾಯ ಹಾಗೂ ಮುಂದಿನ ನಡೆಗಳ ಬಗ್ಗೆ ಸಂವಾದ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಉಪಾಧ್ಯಕ್ಷ ಎನ್.ಮಂಜುನಾಥ್ ಉಪಸ್ಥಿತರಿರುವರು. ಕರ್ನಾಟಕ ಸ್ಟೇಟ್ ಕಂಟ್ರಾೃಕ್ಟರ್ಸ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಎಂ.ಎಸ್. ಸಂಕಗೌಡಶಾನಿ, ಗೌರವಾಧ್ಯಕ್ಷ ಜಗನ್ನಾಥ್ ಬಿ. ಶೇಗಜಿ, ಕೆ.ರಾಧಾಕೃಷ್ಣ ನಾಯ್ಡು ಮತ್ತಿತರರು ಭಾಗವಹಿಸುವರು ಎಂದರು.
ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ವಿಳಂಬವೊಂದೇ ಸಮಸ್ಯೆಯಲ್ಲ. ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇವೆ. ದಿನೇದಿನೆ ಕಚ್ಚಾವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿವೆ. ಮರಳು ಮತ್ತಿತರ ವಸ್ತುಗಳ ಕೊರತೆಯೂ ಉಂಟಾಗಿದೆ. ಇದಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ವರ್ಷದಿಂದ ವರ್ಷಕ್ಕೆ ಗುತ್ತಿಗೆದಾರರ ಸಂಖ್ಯೆ ಹೆಚ್ಚುತ್ತಿದೆ. ಇವರಿಗೆ ಸರ್ಕಾರದ ನಡಾವಳಿಗಳು, ಗುಣಮಟ್ಟ, ಆಧುನಿಕ ತಂತ್ರಜ್ಞಾನ ಮತ್ತು ವಿವಿಧ ದೇಶಗಳು ಅನುಸರಿಸುತ್ತಿರುವ ವೈಜ್ಞಾನಿಕ ಮಾದರಿಗಳ ಕುರಿತು ತರಬೇತಿ ಮತ್ತು ಕಾರ್ಯಾಗಾರ ನಡೆಸಲು ಸಮಿತಿಯಿಂದ ಮುಂದಿನ ದಿನಗಳಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಹಾಗೂ ಭದ್ರಾ ಗುತ್ತಿಗೆದಾರರಿಗೆ ಸುಮಾರು ಐದು ಸಾವಿರ ಕೋಟಿ ರೂ. ಸರ್ಕಾರದಿಂದ ಬಾಕಿ ಬರಬೇಕಿದೆ. ಸಂಕಷ್ಟದಲ್ಲಿರುವ ಗುತ್ತಿಗೆದಾರರಿಗೆ ಸರ್ಕಾರ ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಸಮಿತಿ ಪ್ರಮುಖರಾದ ಚನ್ನಬಸವರಾಜು, ಜಿ.ಎ.ಪ್ರಕಾಶ್, ಎಸ್.ರಾಜೇಶ್ ಗೌಡ, ಆರ್.ಪಾಂಡುರಂಗ, ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.