

ಮೈಸೂರು: ಸ್ಯಾಂಡಲ್ವುಡ್ನ ಹಿರಿಯ ನಟಿ ಬಿ. ಶಾಂತಮ್ಮ(95) ನಿಧನರಾಗಿದ್ದಾರೆ. ಭಾನುವಾರ ಸಂಜೆ 5.45ರ ಸುಮಾರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮೂವರು ಮಕ್ಕಳಿದ್ದು, ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ನಟಿ ಶಾಂತಮ್ಮ ವಾಸವಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಶಾಂತಮ್ಮ , ಚಿನ್ನಾರಿ ಮುತ್ತ, ಚಂದವಳ್ಳಿ ತೋಟ, ಕೆಂಡದ ಮಳೆ, ಬಾಂಬೆ ದಾದಾ, ಗಜೇಂದ್ರ, ಶ್ರುತಿ ಸೇರಿದಾಗ, ಇಂದಿನ ಭಾರತ. ಲಾಕ್ಅಪ್ ಡೆತ್, ರೂಪಾಯಿ ರಾಜ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.
ರಂಗಭೂಮಿ ಹಿನ್ನೆಲೆಯಿಂದ ಬಂದ ಶಾಂತಮ್ಮ, ಡಾ. ರಾಜ್ ಕುಮಾರ್ ಅವರ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಬಿ. ಜಯಮ್ಮ ಅವರ ಸಂಬಂಧಿಯೂ ಆಗಿದ್ದರು. ಪಾರ್ವತಮ್ಮ ರಾಜ್ಕುಮಾರ್ ನಿಧನದ ಬಳಿಕ ಮೈಸೂರಿನ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು.
ನಟಿ ಶಾಂತಮ್ಮ ಸಾವಿನ ಸುದ್ದಿಯನ್ನು ಹಿರಿಯ ನಟ ದೊಡ್ಡಣ್ಣ ಖಚಿತಪಡಿಸಿದ್ದಾರೆ. ಇನ್ನುಳಿದಂತೆ ಹಿರಿಯ ನಟಿಯ ಸಾವಿಗೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದು, ಸೋಮವಾರ ಅಂತ್ಯಸಂಸ್ಕಾರ ನಡೆಯಲಿದೆ.