

R Madhavan: ಸಿನಿಮಾಗಳಲ್ಲಿ ನಟಿಸುವಾಗ ಹಿರಿಯ ನಟರು ತಮ್ಮೊಂದಿಗೆ ನಟಿಸುವ ನಟಿಯರ ಬಗ್ಗೆ ಜಾಗರೂಕರಾಗಿಬೇಕು. ಅದರಲ್ಲೂ ಕಿರಿಯ ನಟಿಯರೊಂದಿಗೆ ನಟಿಸುವಾಗಂತೂ ಇನ್ನೂ ಹೆಚ್ಚಿನ ಜಾಗರೂಕರಾಗಿರಬೇಕು ಎಂದು ನಟ ಆರ್ ಮಾಧವನ್ ಇತ್ತೀಚಿನ ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
55 ವರ್ಷದ ಆರ್. ಮಾಧವನ್ ಇತ್ತೀಚೆಗೆ ರೋಮ್ಯಾಂಟಿಕ್ ಕಾಮಿಡಿ-ಡ್ರಾಮ ಸಿನಿಮಾ ಆಪ್ ಜೈಸಆ ಕೋಯಿ ಚಿತ್ರದಲ್ಲಿ 33 ವರ್ಷದ ಫಾತಿಮಾ ಸನಾ ಶೇಖ್ ಜೊತೆ ನಟಿಸಿದ್ದರು. ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದರೆ, ಮಾಧವನ್ ಮತ್ತು ಫಾತಿಮಾ ಸನಾ ಶೇಖ್ ಅವರ ಅಭಿನಯವು ಮೆಚ್ಚುಗೆ ಗಳಿಸಿತು. ವಿವೇಕ್ ಸೋನಿ ನಿರ್ದೇಶನದ ಈ ಚಿತ್ರದಲ್ಲಿ ಆಯೇಶಾ ರಜಾ, ಮನೀಶ್ ಚೌಧರಿ ಮತ್ತು ನಮಿತ್ ದಾಸ್ ಕೂಡ ನಟಿಸಿದ್ದಾರೆ.
ಸಿನಿಮಾದಲ್ಲಿ ಮಾಧವನ್ ವಧುವನ್ನು ಹುಡುಕುತ್ತಿರುವ ಮಧ್ಯ ವಯಸ್ಕ ವ್ಯಕ್ತಿಯ ಪಾತ್ರವನ್ನು ಮಾಡಿದ್ದಾರೆ. ತಮ್ಮ ವಯಸ್ಸಿನ ಬಗ್ಗೆ ಮಾತನಾಡುತ್ತಾ, ತಾನೂ ಕಿರಿಯ ನಟಿಯರ ಆಯ್ಕೆ ಬಗ್ಗೆ ಹೆಚ್ಚು ಜಾಗರೂಕನಾಗಿರುತ್ತೇನೆ. ಕೇವಲ ಮೋಜಿಗಾಗಿ ಕಿರಿಯ ನಟಿಯರ ಜೊತೆ ಕೆಲಸ ಮಾಡಲು ಬಯಸಲ್ಲ ಎಂದು ಹೇಳಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿರುವ ಮಾಧವನ್ "ನಿಮ್ಮ ವಯಸ್ಸಿನ ಬಗ್ಗೆ ಮೊದಲ ಬಾರಿಗೆ ನೀವು ತಿಳಿಯುವುದು ಯಾವಾಗ ಅಂದ್ರೆ, ನಿಮ್ಮ ಮಕ್ಕಳ ಸ್ನೇಹಿತರು ನಿಮ್ಮನ್ನು 'ಅಂಕಲ್' ಎಂದು ಕರೆಯಲು ಪ್ರಾರಂಭಿಸಿದಾಗ, ಇದು ನಿಮಗೆ ಆಘಾತವನ್ನುಂಟುಮಾಡುತ್ತದೆ. ಆದರೆ ನಂತರ ನೀವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ನೀವು ಯಾವಾಗ ಸಿನಿಮಾ ಮಾಡ್ತಿರೋ ಆಗ ನಾಯಕಿಯರ ಆಯ್ಕೆ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಆ ನಟಿ ನಿಮ್ಮೊಂದಿಗೆ ಕೆಲಸ ಮಾಡಲು ಬಯಸಿದ್ದರೂ ಸಹ, ಚಿತ್ರದ ನೆಪದಲ್ಲಿ ಮೋಜು ಮಾಡುತ್ತಿರುವಂತೆ ಕಾಣಿಸಬಹುದು. ಜನರು ಸಹ ಸಿನಿಮಾ ನೋಡಿ ಅವನು ಮೋಜು ಮಾಡ್ತಿದ್ದಾನೆ ಅಂತ ತಿಳಿಯುತ್ತಾರೆ. ಹಾಗೇ ಒಂದು ವೇಳೆ ಆ ಸಿನಿಮಾದಿಂದ ಅಂತಹ ಭಾವನೆ ಬಂದ್ರೆ, ನಟನ ಆ ಪಾತ್ರಕ್ಕೆ ಗೌರವ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ಮುಂದುವರೆದು, ತಮಗೂ ಕೂಡ ವಯಸ್ಸಾಗಿದೆ, ಯೌವನದಂತಹ ಪತ್ರಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ನನ್ನ ದೇಹದ ಶಕ್ತಿ 22 ವರ್ಷದ ಯುವಕನಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅರಿವು ನನಗಿದೆ ಎಂದಿದ್ದಾರೆ. (ಏಜೆನ್ಸೀಸ್)