ಸೋನಿಯಾಜಿ ನಿಮ್ಮ ಪಪ್ಪೂಜಿಯನ್ನು ಪೊಲಿಟಿಕಲ್ ಪ್ಲೇಸ್ಕೂಲ್​​ಗೆ ಕಳುಹಿಸಿ...: ದಂಡ ಪ್ರಯೋಗದ ಹೇಳಿಕೆಗೆ ಮುಕ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯೆ

Mukthar abbas Naqvi 9 FEB 20
Published on

ಇಂದೋರ್​: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ಅವರನ್ನು ಪೊಲಿಟಿಕಲ್ ಪ್ಲೇಸ್ಕೂಲ್​ಗೆ ಕಳುಹಿಸಿ. ಸಭ್ಯತೆ ಮತ್ತು ಭಾಷಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಕಲಿಯವುದಕ್ಕೆ ಈ ಕ್ರಮ ಉತ್ತಮ ಎಂದು ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಧ್ಯಪ್ರದೇಶದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದ್ದಾರೆ.

ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರು ಇತ್ತೀಚೆಗೆ ದೆಹಲಿ ಚುನಾವಣಾ ಪ್ರಚಾರ ಕಣದಲ್ಲಿ ಭಾಷಣ ಮಾಡುತ್ತ, ದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸದೇ ಇದ್ದರೆ ಇನ್ನಾರು ತಿಂಗಳಲ್ಲಿ ಯುವಜನರು ಪ್ರಧಾನಿಯವರನ್ನು ಬೆತ್ತ ತಗೊಂಡು ಹೊಡೆಯಲಿದ್ದಾರೆ ಎಂದು ಹೇಳಿದ್ದರ ಬಗ್ಗೆ ಸುದ್ದಿಗಾರರು ನಖ್ವಿ ಅವರ ಗಮನಸೆಳೆದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರು ಯಾವಾಗಲು ಕೈನಲ್ಲಿ ಕೊಡಲಿ ಹಿಡಿದುಕೊಂಡೇ ಓಡಾಡುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ಅದನ್ನು ತಮ್ಮ ಕಾಲಿನ ಮೇಲೆಯೇ ಬೀಳಿಸುತ್ತಿರುತ್ತಾರೆ. ಹೀಗಾಗಿ ಕಾಂಗ್ರೆಸ್​ ನಾಯಕರಿಗೆ ವಿಶೇಷವಾಗಿ ಸೋನಿಯಾ ಗಾಂಧಿ ಅವರಿಗೆ ಒಂದು ಸಲಹೆ ನೀಡಲು ಬಯಸುತ್ತೇನೆ. ಅವರ ಪಪ್ಪೂಜಿಯನ್ನು ಪೊಲಿಟಿಕಲ್ ಪ್ಲೇಸ್ಕೂಲ್​ಗೆ ಕಳುಹಿಸಬೇಕು. ಅವರು ಅಲ್ಲಿ ಪಾಲಿಟಿಕ್ಸ್​ನ ಎಬಿಸಿಡಿ ಕಲಿಯಬಹುದು. ಘನತೆ, ಸಭ್ಯತೆ ಮತ್ತು ಭಾಷಾ ಬಳಕೆಯ ವಿಚಾರವನ್ನೂ ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು.

ದೇಶದ ಜನರಿಂದ ಆಯ್ಕೆಯಾದ ಪ್ರಧಾನಿಯವರಿಗೆ ಬೆತ್ತದಿಂದ ಹೊಡೆಯುವ ವಿಚಾರವನ್ನು ಮಾನಸಿಕ ಸಮತೋಲನ ಹೊಂದಿದ ಯಾರೊಬ್ಬರೂ ಸಾರ್ವಜನಿಕವಾಗಿ ಹೇಳಲಾರರು ಎಂದು ನಖ್ವಿ ಅವರು ಟೀಕಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net