ಪೆಟ್ರೋಲ್, ಡೀಸೆಲ್ ಅಕ್ರಮ ದಾಸ್ತಾನು ಪತ್ತೆ

illigala petrol sale
Published on

ಈಶ್ವರಮಂಗಲ: ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಅಂಗಡಿಯೊಂದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಅಕ್ರಮವಾಗಿ ಶೇಖರಿಸಿಟ್ಟು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಂಪ್ಯ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರ್ಲಪದವು ಕಾನ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಹಾಗೂ ಡೀಸೆಲ್ ದಾಸ್ತಾನು ಮಾಡಿಟ್ಟುಕೊಂಡು ಸಾರ್ವಜನಿಕರಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಸಂಫ್ಯ ಠಾಣೆ ಎಸೈ ಉದಯರವಿ ನೇತೃತ್ವದ ಪೊಲೀಸರು ಶುಕ್ರವಾರ ರಾತ್ರಿ ಅಂಗಡಿಗೆ ದಾಳಿ ಮಾಡಿದ್ದರು.

ಈ ಸಂದರ್ಭ ಅಂಗಡಿಯೊಳಗೆ ಕ್ಯಾನ್‌ಗಳಲ್ಲಿ ರೂ.3480 ಮೌಲ್ಯದ 43.5 ಲೀಟರ್ ಪೆಟ್ರೋಲ್, ರೂ.3150 ಮೌಲ್ಯದ 45 ಲೀಟರ್ ಡೀಸೆಲ್ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಬಂದಿದ್ದ ರೂ.480 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕ, ಆರ್ಲಪದವು ನಿವಾಸಿ ಯೂಸುಫ್ ಕೆ.ಎ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net