ಹಸುಗೂಸು ಮಾರಾಟ ಜಾಲದಿಂದ 200 ಕ್ಕೂ ಹೆಚ್ಚು ಮಕ್ಕಳ ಮಾರಾಟ! : ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ

CCB
Published on

ಬೆಂಗಳೂರು: ಹಸುಗೂಸು ಮಾರಾಟ ಜಾಲದ ಬಂಧಿತ ಆರೋಪಿಗಳು ಇದುವರೆಗೆ ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಹಸುಗೂಸು ಮಾರಾಟ ಜಾಲದ ಆರೋಪಿಗಳು ೫೦ ರಿಂದ ೬೦ ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹಸುಗೂಸು ಮಾರಾಟ ಜಾಲದ ಬಂಧಿತ ೧೦ ಮಂದಿ ಆರೋಪಿಗಳು ವಿಚಾರಣೆಯಲ್ಲಿ ಕಳೆದ ೩ ವರ್ಷಗಳಲ್ಲಿ ೨೦೦ ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರವನ್ನು ಬಾಯಿಬಿಟ್ಟಿದ್ದಾರೆ.
ಮಕ್ಕಳ ಮಾರಾಟದ ವಿಚಾರವನ್ನು ಬಾಯಿಬಿಡುತ್ತಿದ್ದಂತೆ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ೧೦ ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ? ಯಾರಿಗೆ? ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಧೆಯಿಂದ ಲಕ್ಷಾಂತರ ರೂ. ಸಂಪಾದನೆ:
ಜಾಲದ ಕರ್ನಾಟಕದ ಗ್ಯಾಂಗ್ ಲೀಡರ್ ಆಗಿದ್ದ ಮಹಾಲಕ್ಷ್ಮೀ ನಾಲ್ಕೈದು ವರ್ಷಗಳ ಹಿಂದೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಈಗ ಮಕ್ಕಳ ಮಾರಾಟ ಜಾಲದಿಂದ ಲಕ್ಷಾಂತರ ರೂ ಸಂಪಾದಿಸಿದ್ದಾಳೆ. ೨೦೧೭ ರಿಂದಲೂ ಈ ದಂಧೆಯನ್ನು ಮಾಡುತ್ತಾ ಬಂದಿರುವ ಮಹಾಲಕ್ಷ್ಮೀ, ಸ್ವಂತ ಮನೆ, ಕಾರು ಜತೆಗೆ ಚಿನ್ನಾಭರಣ ಹೊಂದಿದ್ದಾಳೆ ಎನ್ನಲಾಗಿದೆ. ೨೦೧೫ ರಿಂದ ೨೦೧೭ ರವರೆಗೂ ಗಾರ್ಮೆಟ್ಸ್‌ನಲ್ಲಿ ಕೇವಲ ೮ ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವೇಳೆ ಆಕೆಯ ಪರಿಚಯವಾದ ಮಹಿಳೆಯೊಬ್ಬರು ಅಂಡಾಣು ಕೊಟ್ಟರೇ ಹಣ ಕೊಡುವುದಾಗಿ ಕೇಳಿದ್ದಳು. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು ೨೦ ಸಾವಿರ ರೂ.ನೀಡಿದ್ದಳು. ನಂತರ ದಿನಗಳಲ್ಲಿ ಅಂಡಾಣು ಕೊಡುವರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ.


ಆರೋಪಿಗಳು ೨೦೨೧ ರಿಂದಲೂ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸುವ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದು, ೨೦೨೧ ರ ಬಳಿಕ ಯಾರು ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರಲಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಅವರನ್ನು ಸಂಪರ್ಕಿಸಿ ಅವರಿಗೆ ಗರ್ಭಪಾತ ಮಾಡಿಸಬೇಡಿ, ನಾವು ಮಗುವನ್ನು ನೋಡಿಕೊಳ್ಳುತ್ತೇವೆ. ಮಗು ಆಗುವವರೆಗೂ ಎಲ್ಲ ಖರ್ಚು ವೆಚ್ಚವನ್ನು ಭರಿಸುತ್ತೇವೆ. ಹೆರಿಗೆಯ ಬಳಿಕ ಮಗುವನ್ನು ನಮಗೆ ಕೊಡಿ ಅಂತ ಮನವೊಲಿಸುತ್ತಿದ್ದರು. ಹೆಣ್ಣು ಮಗುವಿಗೆ ೨ ಲಕ್ಷ ರೂ., ಗಂಡು ಮಗುವಿಗೆ ೩ ಲಕ್ಷ ರೂ. ಕೊಡುವ ಒಪ್ಪಂದ ಮಾಡಿ ಆ ಮಕ್ಕಳನ್ನು ಹೊರಗಡೆ ೮ ರಿಂದ ೧೦ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು.

೮ ರಿಂದ ೧೦ ಲಕ್ಷಕ್ಕೆ ಗಂಡು ಮಗು ಮಾರಾಟ:
ಬಂಧಿತರು ಮಗು ಹುಟ್ಟಿದ ಬಳಿಕ ಒಪ್ಪಂದದಂತೆ ಹಣ ಕೊಟ್ಟು, ಆ ಮಕ್ಕಳ ಫೋಟೋಗಳನ್ನು ತಮ್ಮದೇ ಆದ ಗ್ರೂಪಲ್ಲಿ ಹಾಕಿ ಶೇರ್ ಮಾಡುವಂತೆ ಹೇಳಿ ಕಿರಾಕಿಗಳಿಗೆ ಗಾಳ ಹಾಕುತ್ತಿದ್ದರು, ಮಗು ಅಗತ್ಯವಿರುವವರು ಸಂಪರ್ಕಿಸಿದರೆ ಲಿಂಗ, ಬಣ್ಣದ ಮೇಲೆ ಬೆಲೆ ನಿಗಧಿ ಮಾಡಲಾಗುತ್ತಿತ್ತು. ಹೆಣ್ಣು ಮಗು ಆದರೆ ೪ರಿಂದ ೬ ಲಕ್ಷರೂ, ಗಂಡು ಮಗು ಆದರೆ, ೮ ರಿಂದ ೧೦ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಆರೋಪಿಗಳಲ್ಲಿ ಮುರುಗೇಶ್ವರಿ ತನ್ನದೇ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಳು ಜನನ ಪತ್ರವೂ ಮಾಡಿಕೊಡುವುದು ತನಿಖೆ ವೇಳೆ ಬಯಲಾಗಿದೆ.


ಇದು ಬಾವನಾತ್ಮಕವಾದ ವಿಚಾರ:
ಆರೋಪಿಗಳು ಇದುವರೆಗೂ ಹಲವು ಮಕ್ಕಳನ್ನು ಮಾರಾಟ ಮಾಡಿದ್ದಾರೆ. ವಿಚಾರಣೆ ವೇಳೆ ಇದುವರೆಗೂ ೧೦ ಮಕ್ಕಳನ್ನು ಮಾರಾಟ ಮಾಡಿರುವುದ್ದಾಗಿ ಬಾಯ್ಬಿಟ್ಟಿದ್ದಾರೆ. ಮಕ್ಕಳನ್ನು ಖರೀದಿ ಮಾಡಿರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳು ಮಗು ದತ್ತು ಪಡೆದವರಿಗೆ
ತಮ್ಮದೇ ಮಗುವೆಂದು ನಂಬಿಸಿ ಹಣ ಪಡೆದಿದ್ದಾರೆ. ಮಗುವನ್ನು ಪಡೆದವರು ತಮ್ಮದೇ ಮಗುವಿನಂತೆ ಬೆಳೆಸುತ್ತಿರುತ್ತಾರೆ. ಆ ಮಗುವು ಕೂಡ ಅವರನ್ನೇ ಪಾಲಕರೆಂದು ಭಾವಿಸಿರುತ್ತದೆ. ಹೀಗಾಗಿ ಖರೀದಿದಾರರು ಮತ್ತು ಮಗವನ್ನು ಪತ್ತೆ ಹಚ್ಚಿದ್ದರೂ ಮುಂದೆ ಏನು ಮಾಡಬೇಕು ಎಂದು ಯೋಚಿಸಬೇಕಾಗುತ್ತದೆ. ಏಕೆಂದರೆ ಇದು ಮಾನವೀಯತೆ ಮತ್ತು ಬಾವನಾತ್ಮಕವಾದ ವಿಚಾರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬಂಧಿತ ಆರೋಪಿಗಳು ಇದುವರೆಗೂ ೧೦ ಮಕ್ಕಳನ್ನು ಮಾರಾಟ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಹೆಚ್ಚಿನ ತನಿಖೆ ನಂತರ ಆರೋಪಿಗಳು ಒಟ್ಟು ಎಷ್ಟು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂಬುದು ತಿಳಿದು ಬರಲಿದೆ.
ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net