

ಸಾಗರ: ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ್ಯಾದ್ರಿ ಮಾರಾಟ ಕೇಂದ್ರದಲ್ಲಿ ದೊರೆಯುವ ಎಲ್ಲ ಉತ್ಪನ್ನಗಳನ್ನು ವಿವಿಯ ಮುಖ್ಯ ಆವರಣದಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ರೈತ ಸಂಘ (ಸಾಮೂಹಿಕ ನಾಯಕತ್ವ) ಸಾಗರ ಶಾಖೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ರೈತಸ್ನೇಹಿ ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ. ವಿವಿಯಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿರುವ ಕೃಷಿ ಉತ್ಪನ್ನಗಳನ್ನು ರೈತ ತರಬೇತಿ ಕೇಂದ್ರದಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಅಡಕೆಗೆ ಎಲೆಚುಕ್ಕೆ, ಹಳದಿ ಎಲೆ ರೋಗ ವ್ಯಾಪಿಸಿದ್ದು ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಿಂದ ಕೈಗೊಂಡಿರುವ ಅಧ್ಯಯನ ಕುರಿತು ರೈತರಿಗೆ ಕಾಲಕಾಲಕ್ಕೆ ಮಾಹಿತಿ ನೀಡಿ, ರೋಗ ನಿವಾರಣೆಗೆ ಅನುಸರಿಸಬೇಕಾದ ಕ್ರಮದ ಬಗ್ಗೆ ಜಾಗೃತಿಗೊಳಿಸಲು ಸೂಕ್ತ ನಿಗಾವಹಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಎಂ.ಬಿ.ಮಂಜಪ್ಪ, ಅರುಣ್‌ಕುಮಾರ್ ಕಸವೆ, ಚಂದ್ರಶೇಖರ ಗೂರಲಕೆರೆ, ಹೊಯ್ಸಳ ಗಣಪತಿಯಪ್ಪ, ಕನ್ನಪ್ಪ ಹೊಸಕೊಪ್ಪ, ಗುರುಮೂರ್ತಿ, ದೇವು ಕಾನ್ಲೆ ಇತರರಿದ್ದರು.