ನಿಸ್ವಾರ್ಥ ಸೇವೆ ಜನಮಾನಸದಲ್ಲಿ ಶಾಶ್ವತ

srigeri health camp
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಾಚಾರ್ಯ ಡಾ. ಎಂ.ಸ್ವಾಮಿ ಉದ್ಘಾಟಿಸಿದರು. ವಿವೇಕ್ ಬೇಗಾನೆ, ಡಾ. ಸುಭಾಷ್, ಸತೀಶ್ ಭಟ್, ಕಂಬಳಗದ್ದೆ ಮಂಜುನಾಥ್ ಇದ್ದರು.
Published on

ಶೃಂಗೇರಿ: ನಿಸ್ವಾರ್ಥ ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ ಹೇಳಿದರು.
ಜೆಸಿಬಿಎಂ ಕಾಲೇಜಿನಲ್ಲಿ ಭಾನುವಾರ ಲಯನ್ಸ್ ಕ್ಲಬ್, ಭಾರತ ಸೇವಾದಳ ಹಾಗೂ ಬೆಂಗಳೂರಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೇವೆ ಎಂಬುದು ಅಂತರಾತ್ಮದಿಂದ ಮೂಡಿ ಬರಬೇಕು. ವೈದ್ಯರ ತಂಡ ಮನೆ ಬಾಗಿಲಿಗೆ ಬಂದು ಉಚಿತ ಚಿಕಿತ್ಸೆ ನೀಡುವಾಗ ಅದರ ಸದುಪಯೋಗ ಪಡೆದರೆ ಮಾತ್ರ ಶಿಬಿರದ ಉದ್ದೇಶ ಸಾರ್ಥಕವಾಗುತ್ತದೆ. ಸೇವೆ ಎಂದರೆ ಮಾನವೀಯ ಮೌಲ್ಯ. ಲಯನ್ಸ್ ಸಂಸ್ಥೆ ಮಲೆನಾಡಿನಲ್ಲಿ ಇಂತಹ ಅನೇಕ ಶಿಬಿರಗಳ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಸಂಸ್ಥೆ ಅಧ್ಯಕ್ಷ ವಿವೇಕ್ ಬೇಗಾನೆ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಒತ್ತಡದ ನಡುವೆ ಜೀವನ ಸಾಗಿಸುವ ಅನಿವಾರ್ಯತೆ ನಮಗಿದೆ. ಇಂತಹ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪ್ರಮುಖ. ಮಲೆನಾಡಿನಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಿದ್ದು ವರ್ಷಕ್ಕೆ ಒಂದು ಬಾರಿ ತಜ್ಞ ವೈದ್ಯರನ್ನು ಆಹ್ವಾನಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇವೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ಲಯನ್ಸ್ ಸ್ಥಾಪಕ ಸದಸ್ಯರಾದ ಸತೀಶ್ ಭಟ್, ಕಂಬಳಗದ್ದೆ ಮಂಜುನಾಥ್, ಡಾ. ಹರ್ಷ ಸುರೇಶ್, ಡಾ. ಸುಬ್ರಹ್ಮಣ್ಯ, ಡಾ. ಸುಭಾಷ್, ಡಾ. ಅಶ್ವಿನ್‌ಕುಮಾರ್, ಡಾ. ನವ್ಯರಾಜ್, ಭಾರತ ಸೇವಾದಳದ ಜಿಲ್ಲಾ ಸಂಯೋಜಕ ಚಂದ್ರಕಾಂತ್ ಇದ್ದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ ತಪಾಸಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net