ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ

23sgr3
ಸಾಗರದ ಮಾಧ್ವ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಬಾಜಿ ಶಾಂತಮೂರ್ತಿ ದಂಪತಿಗೆ ಅನಂತ ಸೇವಾ ಪುರಸ್ಕಾರ ನೀಡಲಾಯಿತು. ಡಾ. ಗುರುರಾಜ್ ಕಲ್ಲಾಪುರ, ಆನಂದ ಕಲ್ಯಾಣಿ, ಬದರಿನಾಥ್, ವೆಂಕಟೇಶ್ ಕಟ್ಟಿ, ಸಹನಾ ಕಲ್ಯಾಣಿ ಇತರರಿದ್ದರು.
Published on

ಸಾಗರ: ನಾವು ಮಾಡುವ ಕಾರ್ಯ ಸ್ವಾರ್ಥದಿಂದ ಕೂಡಿದ್ದರೆ ಅದು ಸೇವೆ ಎನಿಸುವುದಿಲ್ಲ. ನಿಸ್ವಾರ್ಥ ಸೇವೆ ಮಾಡಿದರೆ ನಮಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಶಿವಮೊಗ್ಗದ ವಿದ್ವಾನ್ ಶ್ರೀನಿಧಿ ಗುಡಿ ಆಚಾರ್ ಹೇಳಿದರು.

ನಗರದ ಮಾಧ್ವ ಸಂಘದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಸೇವಾ ಕಾರ್ಯದಲ್ಲಿ ನಿರತರಾದವರಿಗೆ ಕೊಡಮಾಡುವ ವಾರ್ಷಿಕ ಅನಂತ ಸೇವಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಮಹಾಭಾರತದಲ್ಲಿ ಶ್ರೀ ಕೃಷ್ಣ ನಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಿದ್ದು, ಗೌರವ ಯಾರಿಗೆ ಕೊಡಬೇಕು ಎನ್ನುವ ಪ್ರಶ್ನೆಗೆ ಉತ್ತರವಿದೆ. ಮೊದಲು ಸೇವಾ ನಿರತರಿಗೆ ನಂತರ ಹಿರಿಯರಿಗೆ ನೀಡಬೇಕು ಎಂದಿದೆ. ಗುರು ಸಾರ್ವಭೌಮರ ಆರಾಧನೆಯ ಸಂದರ್ಭದಲ್ಲಿ ಮಾದ್ವ ಸಂಘ ಧಾರ್ಮಿಕ ಕಾರ್ಯಕ್ರಮ ಹಾಗೂ ಜ್ಞಾನ ಸತ್ರವನ್ನು ನಾಲ್ಕು ದಿನ ನಡೆಸಿದೆ. ರಾಘವೇಂದ್ರ ಸ್ವಾಮಿ ಕಲಿಯುಗದ ಕಾಮಧೇನು ಮತ್ತು ಕಲ್ಪವೃಕ್ಷರಾಗಿದ್ದಾರೆ ಎಂದು ತಿಳಿಸಿದರು.

ದೇವರನ್ನು ನಾವು ಪೂಜಿಸಿದ ಕೂಡಲೇ ನಮ್ಮ ಇಷ್ಟಾರ್ಥಗಳು ಪೂರೈಕೆಯಾಗಬೇಕು ಎನ್ನುವ ಭಕ್ತರ ಸಂಖ್ಯೆ ಹೆಚ್ಚಿದೆ. ಆಡಂಬರದ ಪೂಜೆ ಮತ್ತು ಭಕ್ತಿಯಿಂದ ಭಗವಂತನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಿಜವಾದ ಭಕ್ತಿ ಧ್ಯಾನ ಉತ್ತಮ ಕಾರ್ಯಗಳು. ನಮಗೆ ಎಂದಿಗೂ ಯಶಸ್ಸು ತಂದುಕೊಡುತ್ತದೆ. ಬದುಕಿಗೆ ಬೆಳಕು ನೀಡುತ್ತದೆ. ಭಗವಂತನ ಸಾಕ್ಷಾತ್ಕಾರಕ್ಕೆ ಇರುವ ಪ್ರಮುಖ ಮಾರ್ಗ ಭಕ್ತಿ.ಶ್ರೀನಿಧಿ ಗುಡಿ ಆಚಾರ್ವಿದ್ವಾಂಸ

ಸಾಗರ ಮಾದ್ವ ಸಂಘದ ಅಧ್ಯಕ್ಷ ಡಾ. ಗುರುರಾಜ್ ಕಲ್ಲಾಪುರ ಮಾತನಾಡಿ, ವಿಶ್ವಾದ್ಯಂತ ರಾಘವೇಂದ್ರ ಸಾರ್ವಭೌಮರ ಆರಾಧನಾ ಮಹೋತ್ಸವ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿದೆ. ರಾಯರ ಗ್ರಂಥಗಳ ಅಧ್ಯಯನ ಮಾಡುವ ಕೆಲಸ ಆಗಬೇಕು. ಇಂದಿನ ಯುವಪೀಳಿಗೆಗೆ ರಾಯರ ಮಹಿಮೆಯ ಮಹತ್ವ ಪರಿಚಯಿಸಬೇಕು ಎಂದು ಹೇಳಿದರು.
ಅನಂತ ಸೇವಾ ಪ್ರಶಸ್ತಿ ಪುರಸ್ಕೃತ ಸಾಬಾಜಿ ಶಾಂತಮೂರ್ತಿ ಮಾತನಾಡಿ, ಸಮಾಜ ನನ್ನ ಗುರುತಿಸಿ ಗೌರವಿಸಿರುವುದು ರಾಯರ ಪರಮಾನುಗ್ರಹ ಸಿಕ್ಕಂತಾಗಿದೆ. ಸಮಾಜದ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದು ನನ್ನ ಭಾಗ್ಯ. ಸಮಾಜದ ಕೆಲಸಗಳಲ್ಲಿ ಸಾಂಘಿಕವಾಗಿ ತೊಡಗಿಕೊಂಡಾಗ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬದರಿನಾಥ್, ವೆಂಕಟೇಶ್ ಕಟ್ಟಿ, ಶ್ರೀಶಾಚಾರ್, ವಾದಿರಾಜ್ ಸಾಬಾಜಿ, ವಿದ್ವಾನ್ ಪಿ.ಎಲ್.ಗಜಾನನ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net