ಸ್ವಯಂ ಚಾಲಿತ ರಕ್ತ ಪರೀಕ್ಷಾ ಕೇಂದ್ರ ಶೀಘ್ರ ಆರಂಭ

12 nrp 1
ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು. ಪ್ರಶಾಂತ್.ಎಲ್.ಶೆಟ್ಟಿ, ಜುಬೇದಾ,ಡಾ.ಎಲ್ದೋಸ್, ಸಾಜು ಇದ್ದರು.
Published on

ಎನ್.ಆರ್.ಪುರ: ಸರ್ಕಾರಿ ಆಸ್ಪತ್ರೆಯಲ್ಲಿ 50ಲಕ್ಷ ರೂ. ವೆಚ್ಚದ ಸ್ವಯಂ ಚಾಲಿತ ರಕ್ತ ಪರೀಕ್ಷಾ ಕೇಂದ್ರವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡವಿದ್ದು, ಬಡ ರೋಗಿಗಳಿಗೆ ಉತ್ತುಮ ಆರೋಗ್ಯ ಸೇವೆ ದೊರೆಯುತ್ತಿದೆ. ಇಲ್ಲಿನ ಆಸ್ಪತ್ರೆಗೆ ನೇಮಕವಾಗಿ ಬೇರೆಕಡೆ ನಿಯೋಜನೆಗೊಂಡಿರುವ ಎಲ್ಲ ಸಿಬ್ಬಂದಿ ನಿಯೋಜನೆ ರದ್ದುಪಡಿಸಿ ಹಿಂದಕ್ಕೆ ಕರೆಸಿಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ತಾಲೂಕು ಆಸ್ಪತ್ರೆಯಲ್ಲಿ 75ಲಕ್ಷ ರೂ.ವೆಚ್ಚದ ಸಿಟಿ ಸ್ಕಾೃನಿಂಗ್ ಯಂತ್ರ, ತಾಯಿ ಮಗು ಆಸ್ಪತ್ರೆ ಹಾಗೂ ಖಾಲಿ ಇರುವ ಸಿಬ್ಬಂದಿ ಭರ್ತಿ ಮಾಡುವಂತೆ ಸೆ.15 ರಂದು ಶೃಂಗೇರಿಗೆ ಭೇಟಿ ನೀಡುವ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಕ್ಷೇತ್ರದ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ ಅನುದಾನ ನೀಡಲಾಗಿದೆ. ನರ್ಸ್‌ಗಳ ವಸತಿ ಗೃಹ ದುರಸ್ತಿಗೆ 5 ಲಕ್ಷ ರೂ. ತಾಲೂಕು ಆಸ್ಪತ್ರೆ ಮೇಲ್ಛಾವಣಿ ದುರಸ್ತಿಗೆ 12 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಹೇಳಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಆಸ್ಪತ್ರೆಯಲ್ಲಿ ಸ್ಕಾೃನಿಂಗ್ ಯಂತ್ರ ಇಲ್ಲದಿರುವುದರಿಂದ ಗರ್ಭಿಣಿಯರಿಗೆ ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು. ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ಶಾಸಕರು ಕೊಡುಗೆಯಾಗಿ ನೀಡಿದ ಸ್ಕಾೃನಿಂಗ್ ಯಂತ್ರವನ್ನು ತಾಲೂಕು ಆಸ್ಪತ್ರೆಯಲ್ಲಿ ಅಳವಡಿಸುವಂತೆ ವೈದ್ಯಾಧಿಕಾರಿಗೆ ತಿಳಿಸಿದರು.
ಪಪಂ ಸದಸ್ಯರಾದ ಸೈಯದ್ ವಸೀಂ, ಜುಬೇದಾ, ಗ್ರಾಪಂ ಸದಸ್ಯರಾದ ಗೇರುಬೈಲು ನಟರಾಜ್, ಸುನಿಲ್, ಆರ್.ರಮೇಶ್, ಸಾಜು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಎಲ್ದೋಸ್,ಇಒ ಎಚ್.ಡಿ. ನವೀನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net