ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ 20ಕ್ಕೆ

State level yoga competition
Published on

ಶಿವಮೊಗ್ಗ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯಿಂದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಜು.20ರಂದು ಬೆಳಗ್ಗೆ 8ರಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಆರ್.ಮಹೇಂದ್ರ ಹೇಳಿದರು.

ಚಿತ್ರದುರ್ಗದಲ್ಲಿ ಆ.23 ಮತ್ತು 24ರಂದು ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗದಲ್ಲಿ ಆಯ್ಕೆ ಪ್ರಕ್ರಿಯೆ ಹಮ್ಮಿಕೊಂಡಿದ್ದೇವೆ. ಒಟ್ಟು 6 ವಿಭಾಗದಲ್ಲಿ ಸ್ಪರ್ಧೆಗಳಿವೆ. ಎಲ್ಲ ವಿಭಾಗದಲ್ಲೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಧೆಗಳು 10 ರೀತಿಯ ಯೋಗಾಸನ ವಿಭಾಗಗಳಲ್ಲಿ ನಡೆಯಲಿವೆ. ಸಾಂಪ್ರದಾಯಿಕ ಯೋಗಾಸನ, ಮುಂದಕ್ಕೆ ಬಾಗಿ ಮಾಡುವ, ಹಿಂದಕ್ಕೆ ಬಾಗಿ ಮಾಡುವ ಆಸನಗಳು, ಲೆಗ್ ಬ್ಯಾಲೆನ್ಸ್ ಆಸನಗಳು, ಕಲಾತ್ಮಕ ಯೋಗಾಸನ ಜೋಡಿ ಸೇರಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ ಎಂದರು.

ಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣಾ ಸತೀಶ್ ಮಾತನಾಡಿ, ಈ ಸ್ಪರ್ಧೆಗಳು ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗಗಳಲ್ಲಿ ನಡೆಯಲಿವೆ. ಸೀನಿಯರ್ ವಿಭಾಗಗಳಲ್ಲಿ ಮೂರು ರೀತಿ ವಿಂಗಡಿಸಲಾಗಿದ್ದು, 28-35, 35-45, 45-55 ವರ್ಷ ಎಂದು ಎ, ಬಿ, ಸಿ ಗ್ರೂಪ್‌ಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

20ರಂದು ಬೆಳಗ್ಗೆ 9ಕ್ಕೆ ಯುವ ಸಬಲೀಕರಣ, ಆಯುಷ್ ಇಲಾಖೆ, ಯೋಗಾಸನ ಭಾರತ್ ಮತ್ತು ಶಿವಮೊಗ್ಗದ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಪರ್ಧೆ ಉದ್ಘಾಟಿಸುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಆಯುಷ್ ಅಧಿಕಾರಿ ಡಾ. ಲಿಂಗರಾಜ್ ಎಸ್. ಹಿಂಡಸಗಟ್ಟಿ, ಶಿವಗಂಗಾ ಯೋಗಕೇಂದ್ರದ ಸಿ.ವಿ.ರುದ್ರಾರಾಧ್ಯ ಭಾಗವಹಿಸುವರು ಎಂದರು. ಪದಾಧಿಕಾರಿಗಳಾದ ಜಿ.ಎಚ್.ಮಂಗಳಾ, ಮಂಜಪ್ಪ, ವಾಣಿಶ್ರೀ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net