ಜೆಎನ್​ಯು ಘರ್ಷಣೆ ಪ್ರಕರಣ: ಮೊಬೈಲ್ ವಶಕ್ಕೆ ದೆಹಲಿ ಹೈಕೋರ್ಟ್ ಸೂಚನೆ

Delhi Highcourt 14 jan 20
Published on

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್​ಯುು) ಘರ್ಷಣೆಗೆ ಕಾರಣವಾಗಿದ್ದ ವಾಟ್ಸ್​ಆಪ್ ಗುಂಪುಗಳ ಸದಸ್ಯರ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಮಂಗಳವಾರ ಸೂಚಿಸಿದೆ.

ಜನವರಿ 5ರಂದು ಜೆಎನ್​ಯುು ಕ್ಯಾಂಪಸ್​ನಲ್ಲಿ ಹಿಂಸಾಚಾರ ನಡೆಸಲು ‘ಯುನಿಟಿ ಅಗೇನ್​ಸ್ ಲೆಫ್ಟ್’ ಹಾಗೂ ‘ಫ್ರೆಂಡ್ಸ್ ಆಫ್ ಆರ್​ಎಸ್​ಎಸ್’ ವಾಟ್ಸ್​ಆಪ್ ಗುಂಫುಗಳ ಸದಸ್ಯರು ಪರಸ್ಪರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಒಂದು ಅಥವಾ ಎರಡೂ ಗುಂಪಿನ ಸದಸ್ಯರಾಗಿರುವವರ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳುವಂತೆ ನ್ಯಾಯಮೂರ್ತಿ ಬೃಜೇಶ್ ಸೇಠಿ ನಿರ್ದೇಶನ ನೀಡಿದ್ದಾರೆ.

ತನಿಖೆಗೆ ಸಹಕರಿಸುವಂತೆ ಹಾಗೂ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸುವಂತೆ ಜೆಎನ್​ಯುು ರಿಜಿಸ್ಟ್ರಾರ್ ಡಾ. ಪ್ರಮೋದ್ ಕುಮಾರ್​ಗೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ವಾಟ್ಸ್​ಆ್ಯಪ್​ ಅಸಹಾಯಕತೆ

ಎನ್ಕ್ರಿಪ್ಷನ್ ವ್ಯವಸ್ಥೆಯ ಕಾರಣದಿಂದಾಗಿ ಸಂದೇಶಗಳನ್ನು ಪಡೆಯಲು ಆಗುವುದಿಲ್ಲ ಎಂದು ವಾಟ್ಸ್​ಆಪ್ ಮಂಗಳವಾರ ಕೋರ್ಟ್​ಗೆ ತಿಳಿಸಿತು. ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಆಧಾರದಲ್ಲಿ ಸಂದೇಶ ವಿನಿಮಯ ನಡೆಯುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲ. ಸಂಬಂಧಪಟ್ಟವರ ಮೊಬೈಲ್​ಗಳನ್ನು ವಶಪಡಿಸಿಕೊಳ್ಳುವುದರಿಂದ ಮಾತ್ರವೇ ಆ ಸಂದೇಶಗಳನ್ನು ಓದಬಹುದಾಗಿದೆ ಹಾಗೂ ಸಂರಕ್ಷಿಸಬಹುದಾಗಿದೆ ಎಂದು ಕಂಪನಿ ವಿವರಿಸಿತು. ಚಾಟ್ ವಿವರಗಳನ್ನು ಪಡೆಯಲು ಯಾವುದೇ ತಂತ್ರಜ್ಞಾನವಿಲ್ಲ ಎಂದಿತು. ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲ ಡೇಟಾ ಮತ್ತು ದೃಶ್ಯಾವಳಿಗಳನ್ನು ಕಾಯ್ದಿರಿಸುವಂತೆ ಫೇಸ್​ಬುಕ್, ಗೂಗಲ್, ವಾಟ್ಸ್ ಆಪ್ ಮತ್ತು ಆಪಲ್​ಗಳಿಗೆ ಕೋರ್ಟ್ ಸೋಮವಾರ ನಿರ್ದೇಶಿಸಿತ್ತು.

ದೆಹಲಿ ಪೊಲೀಸರಿಗೆ ಕೋರ್ಟ್ ತಪರಾಕಿ

ಪ್ರತಿಭಟನೆ ನಾಗರಿಕ ಹಕ್ಕು. ಜಾಮಾ ಮಸೀದಿ ಏನು ಪಾಕಿಸ್ತಾನದಲ್ಲಿದೆಯೇ? ಒಂದು ವೇಳೆ ಪಾಕಿಸ್ತಾನದಲ್ಲಿದ್ದರೂ ಆರೋಪಿ ಪ್ರತಿಭಟಿಸಬಹುದಿತ್ತು. ಏಕೆಂದರೆ ಪಾಕ್, ಈ ಹಿಂದೆ ಅವಿಭಜಿತ ಭಾರತದ ಭಾಗವೇ ಆಗಿತ್ತು ಎಂದು ದೆಹಲಿ ಕೋರ್ಟ್ ಪೊಲೀಸರಿಗೆ ತಪರಾಕಿ ಹಾಕಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಬಂಧಿತರಾಗಿರುವ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ರ ಜಾಮೀನು ಅರ್ಜಿ ವಿಚಾರಣೆ ವೇಳೆ ಪೊಲೀಸರು, ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ ಎಂದರು. ಇದರಿಂದ ಕುಪಿತರಾದ ನ್ಯಾಯಾಧೀಶರು, ಪೊಲೀಸರನ್ನು ತರಾಟೆಗ ತೆಗೆದುಕೊಂಡರು.

ಸಿಎಎ ವಿರುದ್ಧ ಸುಪ್ರೀಂಗೆ ಕೇರಳ ಸರ್ಕಾರ ಅರ್ಜಿ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೊದಲ ರಾಜ್ಯ ಕೇರಳ. ಕಳೆದ ಡಿಸೆಂಬರ್​ನಲ್ಲಿ ಕೇರಳ ವಿಧಾನಸಭೆ ಪೌರತ್ವ ಕಾಯ್ದೆ ವಿರುದ್ಧ ಗೊತ್ತುವಳಿ ಅಂಗೀಕರಿಸಿದೆ.ಈ ಅವಿಶ್ವಾಸ ಗೊತ್ತುವಳಿಗೆ ಬಿಜೆಪಿಯ ಏಕೈಕ ಶಾಸಕ ಒ. ರಾಜಗೋಪಾಲ್ ಹೊರತುಪಡಿಸಿ ಉಳಿದೆಲ್ಲ ಶಾಸಕರು ಬೆಂಬಲ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net