ವಿದ್ಯಾರ್ಥಿನಿಗೆ ಚುಂಬಿಸಿ, ಬಟ್ಟೆ ಹರಿದ ಪುಂಡರು-ವಿದ್ಯಾರ್ಥಿಗಳ ಪ್ರತಿಭಟನೆ

banaras vv
Published on

ಲಕ್ನೋ: ಐಐಟಿ-ಬಿಎಚ್‌ಯು ಕ್ಯಾಂಪಸ್‌ನ ಹಾಸ್ಟೆಲ್ ಬಳಿ ಬೈಕ್‌ನಲ್ಲಿ ಬಂದ ಮೂವರು ಪುಂಡರು ವಿದ್ಯಾರ್ಥಿನಿಯರಿಗೆ ಮುತ್ತುಕೊಟ್ಟು ವಿವಸ್ತ್ರಗೊಳಿಸಿದ ಘಟನೆ ನಡೆದಿದ್ದು, ಇದರಿಂದ ರೊಚ್ಚಿಗೆದ್ದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪುಂಡರು ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೊರಗಿನವರು ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸಬೇಕು. ಬನಾರಸ್ ಹಿಂದು ವಿಶ್ವವಿದ್ಯಾಲಯ (ಬಿಎಚ್‌ಯು) ಕ್ಯಾಂಪಸ್‌ನಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅನ್ನು ಗೋಡೆ ಕಟ್ಟಿ ಪ್ರತ್ಯೇಕಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಒತ್ತಾಯಿಸಿದರು.

ವಿದ್ಯಾರ್ಥಿ ಪ್ರತಿನಿಧಿಗಳೊಂದಿಗಿನ ಸಭೆಯ ನಂತರ ಸಂಸ್ಥೆಯು ಮುಚ್ಚಿದ ಕ್ಯಾಂಪಸ್‌ನ ಪ್ರಸ್ತಾಪವನ್ನು ಶಿಕ್ಷಣ ಸಚಿವಾಲಯದೊಂದಿಗೆ ಮುಂದುವರಿಸುವುದಾಗಿ ಹೇಳಿದೆ.

ಐಐಟಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್​ ನಿರ್ಬಂಧಿತ ಪ್ರವೇಶವಾಗಿದ್ದು, ಹೊರಗಿನವರು ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ವಿದ್ಯಾರ್ಥಿಗಳ ಓಡಾಟವನ್ನು ನಿರ್ಬಂಧಿಸಲಾಗುವುದು. ಕ್ಯಾಂಪಸ್​ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಶೀಘ್ರದಲ್ಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಂದು ಬನಾರಸ್​ ಹಿಂದು ವಿವಿ ರಿಜಿಸ್ಟ್ರಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಡೆದಿದ್ದೇನು?: ಬುಧವಾರ ರಾತ್ರಿ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್​ ಬಳಿಯ ಕರ್ಮಾನ್ ಬಾಬಾ ದೇವಸ್ಥಾನದ ಬಳಿ ಇದ್ದಾಗ ಮೂವರು ಪುಂಡರು ಬೈಕ್​ನಲ್ಲಿ ಬಂದಿದ್ದಾರೆ. ಆಕೆಯ ಗೆಳೆಯನನ್ನು ದೂರತಳ್ಳಿ ಆಕೆಯನ್ನು ಬಲವಂತವಾಗಿ ಮೂಲೆಗೆ ಎಳೆದೊಯ್ದಿದ್ದಾರೆ. ಬಳಿಕ ವಿದ್ಯಾರ್ಥಿನಿ ಬಾಯಿ ಬಿಗಿದು ಬಟ್ಟೆ ಬಿಚ್ಚಿಸಿ, ಕಿಸ್​ ಕೊಟ್ಟಿದ್ದಾರೆ. ಇದರ ಫೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿದ್ದು, 15 ನಿಮಿಷದ ನಂತರ ಆಕೆಯ ಫೋನ್ ಸಂಖ್ಯೆ ತೆಗೆದುಕೊಂಡು ಹೋಗಲು ಬಿಟ್ಟಿದ್ದಾರೆ. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net