ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಭದ್ರತಾ ಒಪ್ಪಂದ

Trump
Published on

ನವದೆಹಲಿ: ಭಾರತ ಅಮೆರಿಕದೊಂದಿಗೆ ಎರಡು ಬೃಹತ್ ಮೊತ್ತದ ರಕ್ಷಣಾ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಸುಮಾರು 25 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ 30 ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಭಾರತ ಮುಂದಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಈ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕುವ ನಿರೀಕ್ಷೆ ಇದೆ.

ನೌಕಾಪಡೆಗಾಗಿ 2.6 ಬಿಲಿಯನ್ ಡಾಲರ್ ಮೊತ್ತದಲ್ಲಿ 24 ‘ಎಂಎಚ್-60 ರೋಮಿಯೊ’ ಬಹುಕಾರ್ಯ ಹೆಲಿಕಾಪ್ಟರ್​ಗಳು ಹಾಗೂ ಸೇನೆಗಾಗಿ 930 ಮಿಲಿಯನ್ ಡಾಲರ್ ಮೊತ್ತದಲ್ಲಿ 6 ‘ಎಎಚ್-64ಇ’ ಆಕ್ರಮಣಕಾರಿ ಅಪಾಚೆ ಹೆಲಿಕಾಪ್ಟರ್​ಗಳನ್ನು ಭಾರತ ಖರೀದಿಸಲಿದೆ. ಅಮೆರಿಕ ಮತ್ತು ಭಾರತ ಮಧ್ಯೆ ಈ ಒಪ್ಪಂದಗಳಿಗೆ ಅಧಿಕೃತ ಮುದ್ರೆ ಬಿದ್ದರೆ ಮುಂದಿನ ಎರಡು ವರ್ಷಗಳಲ್ಲಿ ಮೊದಲ 6 ಹೆಲಿಕಾಪ್ಟರ್​ಗಳು ಭಾರತಕ್ಕೆ ಸಿಗಲಿವೆ. ಬಳಿಕ 2025ರ ವೇಳೆಗೆ ಉಳಿದ 24 ಹೆಲಿಕಾಪ್ಟರ್​ಗಳನ್ನೂ ಅಮೆರಿಕ ಹಸ್ತಾಂತರಿಸಲಿದೆ ಎಂದು ತಿಳಿದುಬಂದಿದೆ. ಈ ವ್ಯಾಪಾರದ ಮೂಲಕ 2007ರಿಂದ ಅಮೆರಿಕದಿಂದ ಭಾರತ ಖರೀದಿಸಿರುವ ರಕ್ಷಣಾ ಕ್ಷೇತ್ರದ ಸರಕುಗಳ ಒಟ್ಟು ಮೌಲ್ಯ ಬರೋಬ್ಬರಿ 20 ಬಿಲಿಯನ್ ಡಾಲರ್ ಗಡಿ ದಾಟಲಿದೆ. ಈಗಾಗಲೇ 2015ರಲ್ಲಿ 13,952 ಕೋಟಿ ರೂ. ಮೊತ್ತದಲ್ಲಿ ಮಾಡಿಕೊಂಡಿದ್ದ ಒಪ್ಪಂದಡಿ ಭಾರತಕ್ಕೆ ಇಂಥಹ 22 ಅತ್ಯಾಧುನಿಕ ಹೆಲಿಕಾಪ್ಟರ್​ಗಳು ಲಭಿಸಿದ್ದು, ಅವುಗಳನ್ನು ಸೇನೆಯ ವಿವಿಧ ವಲಯಗಳಲ್ಲಿ ನಿಯೋಜಿಸಲಾಗಿದೆ.

ಭಾರತ ಭೇಟಿಗೆ ಮೆಲನಿಯಾ ಉತ್ಸಾಹ: ಡೊನಾಲ್ಡ್ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಭಾರತಕ್ಕೆ ಭೇಟಿ ನೀಡಲು ಅತ್ಯಂತ ಉತ್ಸುಕಳಾಗಿದ್ದೇನೆ ಎಂದಿದ್ದಾರೆ. ‘ಭಾರತ ಭೇಟಿಗೆ ಆಹ್ವಾನಿಸಿದ್ದಕ್ಕೆ ಪ್ರದಾನಿ ಮೋದಿಗೆ ಧನ್ಯವಾದಗಳು. ಅಹಮದಾಬಾದ್ ಮತ್ತು ದೆಹಲಿಗೆ ಭೇಟಿ ನೀಡಲು ಎದುರುನೋಡುತ್ತಿದ್ದೇನೆ’ ಎಂದು ಮೆಲನಿಯಾ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net