ಸಂವಿಧಾನ ಪೀಠಿಕೆಯಿಂದ ಜಾತ್ಯಾತೀತ, ಸಮಾಜವಾದಿ ಪದ ಕೈಬಿಡಲಾಗಿದೆ: ಅಧಿರ್​ ರಂಜನ್​ ಚೌಧರಿ ಆರೋಪ

Adhir Ranjan Chowdhari
Published on

ನವದೆಹಲಿ: ಹೊಸ ಸಂಸತ್​ ಭವನದ ಮೊದಲ ದಿನದಂದು ಸಂಸದರಿಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳಲ್ಲಿ "ಜಾತ್ಯಾತೀತ" ಮತ್ತು "ಸಮಾಜವಾದಿ" ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ತೆಗೆಯಲಾಗಿದೆ ಎಂದು ಕಾಂಗ್ರೆಸ್​ ನಾಯಕ ಅಧಿರ್​ ರಂಜನ್​ ಚೌಧರಿ, ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ನಾವು ಇಂದು ಹೊಸ ಸಂಸತ್ ಭವನದಲ್ಲಿ ಕಾಲಿಡುವಾಗ ನೀಡಿದ ಸಂವಿಧಾನದ ಪ್ರತಿಯ ಪೀಠಿಕೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳಿಲ್ಲ. ಈ ಎರಡು ಪದಗಳು ಸಂವಿಧಾನದಲ್ಲಿ ಇಲ್ಲದಿದ್ದರೆ, ಅದು ಆತಂಕಕಾರಿ ಸಂಗತಿಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್​ ರಂಜನ್​ ಚೌಧರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸರ್ಕಾರವು ಈ ಬದಲಾವಣೆಯನ್ನು ಅತ್ಯಂತ "ಬುದ್ಧಿವಂತಿಕೆಯಿಂದ" ಮಾಡಿದೆ ಮತ್ತು ಅವರ ಉದ್ದೇಶವೇ ಒಂದು "ಸಮಸ್ಯೆ" ಎಂದು ಆರೋಪಿಸಿದರು. ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೇನೆ. ಆದರೆ, ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಚೌಧರಿ ಹೇಳಿದರು.

ಆದರೆ, ಮಂಗಳವಾರ ಮುಂಜಾನೆ ಚೌಧರಿ ಅವರು ಸಂಸತ್ತಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದುತ್ತಿದ್ದರು. ಗಮನಾರ್ಹ ಸಂಗತಿ ಏನೆಂದರೆ, ಅವರು ಮುನ್ನುಡಿಯನ್ನು ಓದುವಾಗ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ಓದಿದರು. ಆದರೆ, ಈಗ ಈ ಎರಡು ಪದಗಳಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.

ಮಂಗಳವಾರ ನೂತನ ಸಂಸತ್ ಭವನದ ಮೊದಲ ದಿನದಂದು ಸಂಸತ್ತಿನ ಸದಸ್ಯರಿಗೆ ಭಾರತದ ಸಂವಿಧಾನದ ಪ್ರತಿ, ಸಂಸತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನು ಸ್ವೀಕರಿಸಿದರು. ನೂತನ ಸಂಸತ್​ ಸಂಕೀರ್ಣವನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಎರಡನೇ ದಿನದ ವಿಶೇಷ ಸಂಸತ್ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net