

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ವಿವಿಧ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಕೆಲಸ ಮಾಡುತ್ತಿದ್ದರು. ಇದೀಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾಲೂಕು ಮಟ್ಟದಲ್ಲಿಯೂ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸುವ ಮೂಲಕ ತಳಮಟ್ಟದಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಮುಂದಾಗಿದ್ದು ಜಿಲ್ಲೆಯ ಐದು ತಾಲೂಕುಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ಸರ್ಕಾರ ನೇಮಕ ಮಾಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕಾದ ಅನಿವಾರ್ಯತೆಯಿದೆ. ಜತೆಗೆ ಬರ ನಿರ್ವಹಣಾ ಕಾಮಗಾರಿಗಳು, ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಾಲೂಕು ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಉಸ್ತುವಾರಿಗಳ ಜವಾಬ್ದಾರಿ: ಪ್ರತಿ ತಾಲೂಕಿಗೆ ನಿಯೋಜನೆಯಾಗಿರುವ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಕೆಲಸದೊಂದಿಗೆ ಪ್ರತಿ ತಿಂಗಳೂ ತಮ್ಮ ತಾಲೂಕಿಗೆ ಎರಡು ಬಾರಿ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಜತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.
ರಸ್ತೆ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ವೃದ್ಧಿಸಲು ಕ್ರಮ, ಪಡಿತರ ವಿತರಣೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು, ಹೀಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕ ವಿಷಯಗಳ ಬಗ್ಗೆ ಗಮನಹರಿಸುವಂತೆ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಮಲೆನಾಡಿನ ಸಮಸ್ಯೆ: ಮಲೆನಾಡು ಭಾಗದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ರಸ್ತೆ, ಭೂ ಮಂಜೂರಾತಿ, ಕಾಡುಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ ಸಮಸ್ಯೆಗಳಿಂದ ಬೆಳೆ ಬೆಳೆಯುವುದೇ ಕಷ್ಟವಾಗಿದೆ. ಜತೆಗೆ ಕಳಸವನ್ನು ತಾಲೂಕು ಎಂದು ಘೋಷಿಸಿದ್ದರೂ ಅಲ್ಲಿ ಅಧಿಕಾರಿಗಳೇ ಇಲ್ಲ. ಇನ್ನು ಮಲೆನಾಡು ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಜನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಗಳು ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಸ್ಥಿತಿಯಿದೆ. ಹೀಗಿರುವಾಗ ಮಲೆನಾಡು ಭಾಗದ ತಾಲೂಕುಗಳಿಗೆ ಉಸ್ತುವಾರಿ ಕಾರ್ಯದರ್ಶಿ ನೇಮಕ ಮಾಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ನೇಮಕ: ರಾಜ್ಯ ಸರ್ಕಾರ ಎಲ್ಲ ತಾಲೂಕುಗಳಿಗೂ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ಆದರೆ ಚಿಕ್ಕಮಗಳೂರಿನ ನಾಲ್ಕು ತಾಲೂಕುಗಳಿಗೆ ಉಸ್ತುವಾರಿ ನೇಮಕ ಮಾಡಿಲ್ಲ ಎಂದಾಕ್ಷಣ ಆ ತಾಲೂಕುಗಳನ್ನು ಸರ್ಕಾರ ಕಡೆಗಣಿಸಿದೆ ಎಂದಲ್ಲ. ಮುಂದಿನ ದಿನಗಳಲ್ಲಿ ಆ ನಾಲ್ಕು ತಾಲೂಕುಗಳಿಗೂ ಕಾರ್ಯದರ್ಶಿಗಳ ನೇಮಕವಾಗಲಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಮಲೆನಾಡಿನ ನಾಲ್ಕು ತಾಲೂಕುಗಳಿಗೆ ಉಸ್ತುವಾರಿ ನೇಮಕ ಆಗುವವರೆಗೆ ಅಲ್ಲಿನ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ನೋಡಿಕೊಳ್ಳಲು ಅಕ್ಕಪಕ್ಕದ ತಾಲೂಕುಗಳ ಉಸ್ತುವಾರಿ ಕಾರ್ಯದರ್ಶಿಗಳಿಗೆ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡುವ ಸಾಧ್ಯತೆಯಿದೆ. ಕೆಲವೇ ದಿನಗಳಲ್ಲಿ ಈ ಎಲ್ಲ ಗೊಂದಲಗಳು ಪರಿಹಾರವಾಗಲಿವೆ ಎಂದು ಹೇಳಿದರು.
ಉಸ್ತುವಾರಿ ಕಾರ್ಯದರ್ಶಿಗಳು: 1.ಚಿಕ್ಕಮಗಳೂರು: ನಾರಾಯಣ ರಡ್ಡಿ ಕನಕರಡ್ಡಿ (ಎಡಿಸಿ), 2. ಕಡೂರು: ಆರ್.ರೂಪಾ (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕಿ ಬೆಂಗಳೂರು), 3. ಶೃಂಗೇರಿ: ಡಾ. ಬಿ.ಉದಯಕುಮಾರ್ ಶೆಟ್ಟಿ (ಜಂಟಿ ಕಾರ್ಯದರ್ಶಿ ಕಂದಾಯ ಗ್ರಾಮಗಳ ರಚನಾ ಕೋಶ), 4. ತರೀಕೆರೆ: ಆರ್.ಮೇಘನಾ (ಎಸ್‌ಎಲ್‌ಎಒ, ಎನ್‌ಎಚ್‌ಎಐ ಶಿವಮೊಗ್ಗ), 5. ಅಜ್ಜಂಪುರ: ಕೆ.ಜೆ.ಕಾಂತರಾಜ್, ತರೀಕೆರೆ ಎಸಿ