

ಶಿವಮೊಗ್ಗ: ಜಿಲ್ಲೆಯಲ್ಲಿ ಏ. 29ರಿಂದ ಮೇ 16ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2 ನಡೆಯಲಿದೆ. ಪರೀಕ್ಷೆ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ನಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2 ಕುರಿತು ಪೂರ್ವಭಾವಿ ಸಭೆ ನಡೆಸಿ, ಶಿವಮೊಗ್ಗದ 2 ಮತ್ತು ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ ತಾಲೂಕುಗಳಲ್ಲಿ ತಲಾ ಒಂದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 3,531 ವಿದ್ಯಾರ್ಥಿಗಳು 2ನೇ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮೇ 16ರಂದು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 2.15ರಿಂದ ಸಂಜೆ 4.30ರವರೆಗೆ ನಡೆಯಲಿವೆ. ಪ್ರಶ್ನೆಪತ್ರಿಕೆ ಸಾಗಾಟ ಮಾಡಲು ತ್ರಿಸದಸ್ಯ ಸಮಿತಿ ನೇಮಿಸಲಾಗಿದೆ. ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸಹ ಮುಖ್ಯ ಅಧೀಕ್ಷಕರು ಮತ್ತು ಜಾಗೃತ ದಳದ ಸದಸ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು. ಪರೀಕ್ಷಾ ಕೇಂದ್ರಗಳ ಅಧೀಕ್ಷಕರಿಗೆ ಈಗಾಗಲೇ ತರಬೇತಿ ನೀಡಿದ್ದು, ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದರು.
ದ್ವಿತೀಯ ಪಿಯು ಪರೀಕ್ಷೆ ನಡೆದ ಮಾದರಿಯಲ್ಲೇ ನಡೆಯಲಿದೆ. ಆದರೆ ಈ ಬಾರಿ ಪರೀಕ್ಷೆ ನಡೆಯುವುದನ್ನು ವೆಬ್ ಕ್ಯಾಮೆರಾ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪರೀಕ್ಷೆ ಯಶಸ್ವಿಗೊಳಿಸಬೇಕು ಎಂದರು. ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಚಂದ್ರಪ್ಪ ಗುಂಡಪಲ್ಲಿ, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಜರಿದ್ದರು.