

ಬೆಂಗಳೂರು: ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ರಾಜ್ಯ ಸರ್ಕಾರವೂ ಸಕ್ರಿಯವಾಗಿದೆ. ಬೆಂಗಳೂರಿಗೆ ಹೊಂದಿಕೊಂಡಂತೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸಲು ತರಾತುರಿಯಲ್ಲಿ ಹೊರಟಿದೆ. ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಂತೂ ನಿಶ್ಚಿತ. ಎಲ್ಲಿ ಸ್ಥಾಪನೆ ಎಂಬುದನ್ನು ನಾಲ್ಕು ಮಾನದಂಡಗಳ ಆಧಾರದಲ್ಲಿ ಮತ್ತು ತಜ್ಞರ ಸಲಹೆ ಪಡೆದು ಸಂಪುಟದಲ್ಲಿ ನಿರ್ಧರಿಸಲಾಗುತ್ತದೆ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಾರ್ಷಿಕವಾಗಿ 100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ ಎಂದರು. ಯಾವ ದೃಷ್ಟಿಯಿಂದ ನೋಡಿದರೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2035ರ ವೇಳೆಗೆ ತನ್ನ ಧಾರಣಾಶಕ್ತಿಯ ತುತ್ತತುದಿ ಮುಟ್ಟಲಿದೆ. ನಾವು ಈ ಯೋಜನೆಯನ್ನು ಘೋಷಿಸಿದ ನಂತರವಷ್ಟೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಿಸುವ ಮಾತುಗಳನ್ನಾಡಲು ಆರಂಭಿಸಿದೆ. ಅದರಿಂದ ನಮಗೇನೂ ತೊಂದರೆ ಇಲ್ಲ. ಅವರ ತೀರ್ಮಾನದ ಬಗ್ಗೆ ನಾವು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಲಿಮಿಟೆಡ್ (ಬಿಐಎಎಲ್) 2033ರವರೆಗೆ 150 ಕಿ.ಮೀ. ಸುತ್ತಳತೆಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಬಾರದು ಎನ್ನುವ ಷರತ್ತನ್ನು ಹಾಕಿತ್ತು. ಈ ಷರತ್ತು 2033ಕ್ಕೆ ಮುಗಿಯಲಿದೆ. ನಾವು ಈಗಿನಿಂದಲೇ ಕೆಲಸ ಮಾಡಿದರೆ ಆ ವೇಳೆಗೆ ನೂತನ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿಯೇ ಬಿಡಬಹುದು ಎಂದು ಹೇಳಿದರು.
100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಹೊಸ ವಿಮಾನ ನಿಲ್ದಾಣಕ್ಕೆ 4,500-5,000 ಎಕರೆ ಭೂಮಿ ಬೇಕಾಗಲಿದ್ದು, ವ್ಯಾಜ್ಯ ರಹಿತ ಭೂಮಿ ಸಿಗುವಂತಾಗಬೇಕು.
ಸುತ್ತಮುತ್ತ ಎಲ್ಲೂ ಬೆಟ್ಟಗುಡ್ಡ, ನದಿ, ಸಮುದ್ರಗಳಿರಬಾರದು. ರಾಜ್ಯ, ರಾಷ್ಟ್ರ ಹೆದ್ದಾರಿ, ರೈಲು ಮತ್ತು ಮೆಟ್ರೋ ಸಂಪರ್ಕ ಇರಬೇಕು. ಪ್ರಯಾಣಿಕರ ಹರಿವಿನ ದಟ್ಟಣೆ ಪರಿಗಣಿಸಲಾಗುತ್ತದೆ.
ದೆಹಲಿ, ಮುಂಬೈಗಳಲ್ಲಿ ಹಳೆ ವಿಮಾನ ನಿಲ್ದಾಣಗಳಿಂದ 40 ಕಿಮೀ ಅಂತರದಲ್ಲೇ 2ನೇ ವಿಮಾನ ನಿಲ್ದಾಣವಿದೆ. ಇದನ್ನು ಪರಿಗಣಿಸಿದರೆ ಮೆಟ್ರೋ ಸಂಪರ್ಕ ಕಲ್ಪಿಸಿ ಹತ್ತಿರದಲ್ಲೇ ಮತ್ತೊಂದು ಸ್ಥಾಪನೆ.
ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ, ದೊಡ್ಡಬಳ್ಳಾಪುರ, ಡಾಬಸ್‌ಪೇಟೆ, ತುಮಕೂರು ಮುಂತಾದ ಸ್ಥಳಗಳು ಸರ್ಕಾರದ ಮನಸ್ಸಿನಲ್ಲಿದೆ. ಭೂಮಿ ಲಭ್ಯತೆ ನೋಡಿ ತೀರ್ಮಾನವಾಗಲಿದೆ.
ಕೆಐಎನಲ್ಲಿ ವರ್ಷಕ್ಕೆ 52 ಮಿಲಿಯನ್ ಪ್ರಯಾಣಿಕರು, 0.71 ಮಿಲಿಯನ್ ಟನ್ ಸರಕು ಸಾಗಣೆ ನಿರ್ವಹಣೆ ಆಗುತ್ತಿದೆ. ಇವುಗಳನ್ನು ಕ್ರಮವಾಗಿ 110 ಮಿಲಿಯನ್ ಮತ್ತು 1.10 ಮಿಲಿಯನ್ ಟನ್ ವಿಸ್ತರಿಸಬಹುದು. 2035ರ ವೇಳೆಗೆ ಇದು ಗರಿಷ್ಠ ಮಟ್ಟ ತಲುಪಲಿದೆ. ಮತ್ತೆ ವಿಸ್ತರಣೆ ಅಸಾಧ್ಯ.