ತನ್ನನ್ನು ತೊರೆದು 2ನೇ ಮದುವೆಯಾದ ಪತ್ನಿಗೆ ಕಿರುಕುಳ ಕೊಟ್ಟ ಲಾರಿ ಕ್ಲೀನರ್​ ಏನಾದ?

murder
Published on

ಬೆಂಗಳೂರು: ಮೊದಲು ತನ್ನನ್ನು ಮದುವೆಯಾಗಿ ಅನೇಕ ವರ್ಷ ಸಂಸಾರ ಮಾಡಿದ ಬಳಿಕ ತನ್ನನ್ನು ತೊರೆದು ಮತ್ತೊಬ್ಬನನ್ನು ವಿವಾಹವಾಗಿದ್ದಾಕೆಗೆ ಹಾಗೂ ಆಕೆಯ ತಾಯಿಗೆ ಮೊದಲ ಪತಿ ಇನ್ನಿಲ್ಲದ ಕಿರುಕುಳ ನೀಡಿ, ಶವವಾಗಿದ್ದಾನೆ.

ಲಾರಿ ಕ್ಲೀನರ್​ ಆಗಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಸಿದ್ಧರಾಜು (28) ಹತನಾದವ. ಈತನ ಮಾಜಿ ಪತ್ನಿ ಲತಾಳ (26) ಎರಡನೇ ಪತಿ ಲಕ್ಷ್ಮಣ್​ ಹತ್ಯೆ ಮಾಡಿದವ. ಸದ್ಯ ಲಕ್ಷ್ಮಣ್​ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಕೈಗೊಂಡಿರುವುದಾಗಿ ಬಸವನಗುಡಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 11.30ರಲ್ಲಿ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಶವವೊಂದು ಬಿದ್ದಿರುವುದಾಗಿ ಸಾರ್ವಜನಿಕರು ಫೋನ್​ ಮಾಡಿದ್ದರು. ತಕ್ಷಣವೇ ಸ್ಥಳಕ್ಕೆ ಹೋದಾಗ, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆತನ ದೇಹದ ಮೇಲೆ ಅನೇಕ ಕಡೆ ಮಾರಣಾಂತಿಕ ಗಾಯಗಳಾಗಿರುವುದು ಕಂಡುಬಂದಿತು ಎಂದು ಹೇಳಿದ್ದಾರೆ.

ಈತನ ಬಗ್ಗೆ ವಿಚಾರಿಸಿದಾಗ, ಸಿದ್ಧರಾಜು ಅನೇಕ ವರ್ಷಗಳ ಹಿಂದೆ ಲತಾ ಎಂಬಾಕೆಯನ್ನು ಮದುವೆಯಾಗಿದ್ದ. ಹಲವು ವರ್ಷ ಈತನೊಂದಿಗೆ ಸಂಸಾರ ನಡೆಸಿದ ಲತಾ ನಂತರದಲ್ಲಿ ಹೂವು ವ್ಯಾಪಾರಿ ಲಕ್ಷ್ಮಣ್​ ಎಂಬಾತನಲ್ಲಿ ಅನುರಕ್ತಳಾಗಿದ್ದಳು. ಕೊನೆಗೆ ಸಿದ್ಧರಾಜುವನ್ನು ತೊರೆದು ಲಕ್ಷ್ಮಣನನ್ನು ಮದುವೆಯಾಗಿದ್ದಳು ಎಂಬ ಸಂಗತಿ ಗೊತ್ತಾಯಿತು ಎಂದು ತಿಳಿಸಿದ್ದಾರೆ.

ಲತಾ ತನ್ನಿಂದ ದೂರಾದರೂ ಆಕೆ ಹಾಗೂ ಆಕೆಯ ತಾಯಿಯ ಜತೆ ಸಿದ್ಧರಾಜು ಜಗಳವಾಡುತ್ತಿದ್ದ. ಗುರುವಾರ ಕೂಡ ಮೂವರ ನಡುವೆ ಭಾರಿ ಜಗಳವಾಗಿತ್ತು. ಈ ವಿಷಯ ತಿಳಿದ ಲಕ್ಷ್ಮಣ ಸಿಟ್ಟಾಗಿ ಸಿದ್ಧರಾಜುಗಾಗಿ ಹುಡುಕಾಟ ನಡೆಸಿದ್ದ. ಶುಕ್ರವಾರ ರಾತ್ರಿ ಮದ್ಯ ಸೇವಿಸಿದ ಬಳಿಕ ಸಿದ್ದರಾಜು ತನ್ನ ಲಾರಿಯತ್ತ ತೆರಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಆತನ ಬಳಿ ಹೋಗಿ ಜಗಳ ತೆಗೆದಿದ್ದ. ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಚೂರಿಯಿಂದ ಆತನ ಮೇಲೆ ಮನಸೋಇಚ್ಛೆ ದಾಳಿ ಮಾಡಿ, ಆತನನ್ನು ಕೊಂದು ಪರಾರಿಯಾಗಿದ್ದಾನೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net