ಡಿಜಿಟಲ್​ ಚಿನ್ನದಲ್ಲಿ ಹೂಡಿಕೆಗೂ ಮುನ್ನ ಇರಲಿ ಎಚ್ಚರ! ಅಚ್ಚರಿ ಸಂಗತಿ ರಿವೀಲ್ ಮಾಡಿದ ಸೆಬಿ | SEBI

Untitled design (52)
Published on

ನವದೆಹಲಿ: ಪ್ರಸ್ತುತ, ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, 24 ಕ್ಯಾರೆಟ್ ಚಿನ್ನದ 10 ಗ್ರಾಂನ ಬೆಲೆ 1.22 ಲಕ್ಷ ರೂ.ಗೂ ಅಧಿಕವಾಗಿದೆ (SEBI). ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇದರಿಂದಾಗಿ, ಅನೇಕರು ಚಿನ್ನದಲ್ಲಿ ಹೂಡಿಕೆ ಮಾಡಲು ಡಿಜಿಟಲ್ ಗೋಲ್ಡ್​ನತ್ತ ಮುಖ ಮಾಡುತ್ತಿದ್ದಾರೆ. ಆನ್​ಲೈನ್​ನಲ್ಲಿ ಚಿನ್ನ ಅಥವಾ ಇ-ಚಿನ್ನದಲ್ಲಿ ಇನ್ವೆಸ್ಟ್​ ಮಾಡಲು ಹೆಚ್ಚು ಆಸಕ್ತಿ ತೋರುತ್ತಿರುವ ಜನರಿಗೆ ಇದೀಗ ಖುದ್ದಾಗಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಎಚ್ಚರಿಕೆ ಗಂಟೆಯನ್ನು ರವಾನಿಸಿದೆ.

ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುವ ಪರ್ಯಾಯವಾಗಿ ಡಿಜಿಟಲ್ ಚಿನ್ನವು ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ, ಅನೇಕ ಯೋಜನೆಗಳು ಮಾರುಕಟ್ಟೆಯನ್ನು ತುಂಬುತ್ತಿವೆ. ವೆಬ್‌ಸೈಟ್‌ ಮತ್ತು ಅಪ್ಲಿಕೇಶನ್‌ಗಳು ಹೆಚ್ಚಾಗಿ ಲಭ್ಯವಾಗಿವೆ. ಡಿಜಿಟಲ್​ ಪಾವತಿ ಸೇವೆಗಳನ್ನು ಒದಗಿಸುವ ಕಂಪನಿಗಳು ಸಹ ಈ ಆಯ್ಕೆಯನ್ನು ತಮ್ಮ ಬಳಕೆದಾರರಿಗೆ ನೀಡಿವೆ. ಈ ಮೂಲಕ ಡಿಜಿಟಲ್​ ಗೋಲ್ಡ್ ಹೂಡಿಕೆಯತ್ತ ಜನರ ಗಮನ ಸೆಳೆಯುವಲ್ಲಿ ಪಾವತಿ ಆ್ಯಪ್​ಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಅನೇಕರು ಡಿಜಿಟಲ್​ ಗೋಲ್ಡ್​ನಲ್ಲಿ ಹೂಡಿಕೆ ಮಾಡಲು ಮುಖ್ಯ ಕಾರಣವೇ, ಅವರು ನೀಡುವ ಸಣ್ಣ ಪ್ರಮಾಣದ ಆಯ್ಕೆ! ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಲು ನೀಡುವ ಅವಕಾಶವು, ಹೂಡಿಕೆದಾರರನ್ನು ಹೆಚ್ಚಾಗಿ ಉಪಯೋಗಿಸುವಂತೆ ಆಕರ್ಷಿಸುತ್ತದೆ. ಆದಾಗ್ಯೂ, ಸೆಬಿ ಮಾತ್ರ ಇಂತಹ ಡಿಜಿಟಲ್ ಗೋಲ್ಡ್ ಹೂಡಿಕೆಗಳ ವಿರುದ್ಧ ತಿರುಗಿ ಬಿದ್ದಿದೆ. ಮತ್ತು ಹೂಡಿಕೆದಾರರಿಗೆ ಎಚ್ಚರಿಕೆಯಿಂದ ಹೂಡಿಕೆ ಮಾಡುವಂತೆ ಕಿವಿಮಾತು ನೀಡಿದೆ.

ಇತ್ತೀಚೆಗೆ, ಹಲವಾರು ಖಾಸಗಿ ಕಂಪನಿಗಳು ಮೊಬೈಲ್ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ಗಳ ಮೂಲಕ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಗ್ರಾಹಕರಿಗೆ ಡಿಜಿಟಲ್ ಚಿನ್ನದ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸುವ ಅವಕಾಶವನ್ನು ನೀಡುತ್ತಿವೆ. ಇದಲ್ಲದೆ, ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಅಪ್ಲಿಕೇಶನ್‌ಗಳು ಸಹ ಈ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ. ಇದರಿಂದಾಗಿ, ಬಳಕೆದಾರರು ತಮ್ಮ ಮೊಬೈಲ್‌ನಿಂದ ಕೆಲವು ರೂ.ಗೆ ಚಿನ್ನವನ್ನು ಖರೀದಿಸಬಹುದು. ಕ್ಯಾರೆಟ್‌ಲೇನ್ ವೆಬ್‌ಸೈಟ್ ಪ್ರಕಾರ, ಡಿಜಿಟಲ್ ಚಿನ್ನವು ಚಿನ್ನದ ಒಂದು ರೂಪವಾಗಿದ್ದು, ಅಲ್ಲಿ ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದಾಗಿದೆ. ಅದನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಇಚ್ಛೆಯಂತೆ ಅದನ್ನು ಆಭರಣ ಅಥವಾ ಚಿನ್ನದ ನಾಣ್ಯಗಳಾಗಿ ರಿಡೀಮ್ ಮಾಡಬಹುದು.

ಸೆಬಿ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಚಿನ್ನದ ಯೋಜನೆಗಳು ಹೆಚ್ಚು ಅಪಾಯಕಾರಿ. ಇವುಗಳಲ್ಲಿ ಯಾವುದೂ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೂಡಿಕೆದಾರರಿಗೆ ಇಲ್ಲಿ ಯಾವುದೇ ಭದ್ರತೆ ಇಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ. ಡಿಜಿಟಲ್ ಚಿನ್ನದ ಪ್ರಾಡೆಕ್ಟ್​ಗಳು ಸೆಬಿ ನಿಯಂತ್ರಣದ ವ್ಯಾಪ್ತಿಗೆ ಬರುವುದಿಲ್ಲ. ಪ್ರಸ್ತುತ ಕಾನೂನುಗಳ ಪ್ರಕಾರ, ಅವು ಸೆಕ್ಯುರಿಟೀಸ್ ಅಥವಾ ಸರಕು ಉತ್ಪನ್ನಗಳಲ್ಲ. ಆದ್ದರಿಂದ, ಸೆಬಿ ನಿಯಂತ್ರಣವು ಅವುಗಳಿಗೆ ಅನ್ವಯಿಸುವುದಿಲ್ಲ. ಕಂಪನಿ ಅಥವಾ ಅಪ್ಲಿಕೇಶನ್ ಮುಚ್ಚಲ್ಪಟ್ಟರೆ ಅಥವಾ ದಿವಾಳಿಯಾದರೆ, ಹೂಡಿಕೆದಾರರು ತಮ್ಮ ಹಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ ಎಂದು ಸೆಬಿ ಎಚ್ಚರಿಸಿದೆ.

ಪರ್ಯಾಯ ಏನು?

ಸೆಬಿ ಚಿನ್ನದಲ್ಲಿ ಹೂಡಿಕೆ ಮಾಡಲು ಕೆಲವು ಸುರಕ್ಷಿತ ಮಾರ್ಗಗಳನ್ನು ಸೂಚಿಸಿದ್ದು, ಮ್ಯೂಚುವಲ್ ಫಂಡ್‌, ಗೋಲ್ಡ್ ಫಂಡ್‌, ಇ-ಗೋಲ್ಡ್ ರಶೀದಿಗಳು (EGRಗಳು) ಮತ್ತು ಎಕ್ಸ್‌ಚೇಂಜ್-ಟ್ರೇಡೆಡ್ ಉತ್ಪನ್ನಗಳು ನೀಡುವ ಚಿನ್ನದ ವಿನಿಮಯ-ವಹಿವಾಟು ನಿಧಿಗಳಲ್ಲಿ (ಚಿನ್ನದ ಇಟಿಎಫ್‌ಗಳು) ಮಾತ್ರ ಹೂಡಿಕೆ ಮಾಡಬೇಕು ಎಂದು ಸೆಬಿ ಸಲಹೆ ನೀಡಿದೆ. ಸೆಬಿಯಲ್ಲಿ ನೋಂದಾಯಿಸಲಾದ ಮಧ್ಯವರ್ತಿಗಳ ಮೂಲಕ ಮಾತ್ರ ಹೂಡಿಕೆ ಮಾಡುವುದು ಒಳಿತು ಎಂದು ಒತ್ತಿ ಹೇಳಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net