

ವಾರಾಣಸಿ: ಫೆ.16ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದು ಸೀಟಿನಲ್ಲಿ ಯಾರೂ ಕುಳಿತುಕೊಳ್ಳುವಂತಿಲ್ಲ. ಇದು ರೈಲ್ವೆ ಅಧಿಕಾರಿಗಳದ್ದೇ ನಿರ್ಧಾರ.
ನಿನ್ನೆ ಚಾಲನೆ ಪಡೆದುಕೊಂಡಿರುವ ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ನ ಬಿ5 ಕೋಚ್ನ 64ನೇ ನಂಬರ್ನ ಸೀಟು ಯಾವುದೇ ಪ್ರಯಾಣಿಕರಿಗೂ ಲಭ್ಯ ಇರುವುದಿಲ್ಲ. ಈ ಆಸನವನ್ನು ಕಾಶಿಯ ದೇವರು ಶಿವನಿಗೇ ಮೀಸಲಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಅಷ್ಟೇ ಅಲ್ಲ ಸೀಟಿನ ಮೇಲೆ ಒಂದು ಸಣ್ಣ ಶಿವನ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಈ ಮೂಲಕ ದೇವಾಲಯವನ್ನು ಹೊಂದಿದ ಮೊದಲ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಈ ರೈಲು ವಾರಾಣಸಿ ಮತ್ತು ಇಂಧೋರ್ ನಡುವೆ ಲಖನೌ ಮೂಲಕ 1131 ಕಿಮೀ ದೂರ ಹಾಗೂ ಪ್ರಯಾಗ್ ರಾಜ್ ಮೂಲಕ 1102 ಕಿಮೀ ಸಂಚಾರ ಮಾಡಲಿದೆ.
ಎರಡು ಖಾಸಗಿ ತೇಜಸ್ ರೈಲುಗಳನ್ನು ಪ್ರಾರಂಭ ಮಾಡಿದ್ದ ಭಾರತೀಯ ರೈಲ್ವೆ ಇಲಾಖೆ (ಐಆರ್ ಸಿಟಿಸಿ) ಇದೀಗ ಕಾಶಿ ಮಹಾಕಾಲ್ ಎಂಬ ಹೊಸ ಖಾಸಗಿ ರೈಲು ಸಂಚಾರವನ್ನು ಆರಂಭ ಮಾಡಿದೆ. ಈ ರೈಲು ಸಂಚಾರ ಫೆಬ್ರವರಿ 20ರಿಂದ ಶುರುವಾಗಲಿದ್ದು ಜ್ಯೋತಿರ್ಲಿಂಗ -ಓಂಕಾರೇಶ್ವರ, ಮಹಾಕಾಲೇಶ್ವರ, ಕಾಶಿ ವಿಶ್ವನಾಥದಂತಹ ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ಟ್ರೇನ್ ವಾರದಲ್ಲಿ ಮೂರು ದಿನ ಸಂಚಾರ ಮಾಡಲಿದೆ. (ಏಜೆನ್ಸೀಸ್)