ಮುದ್ರೆಗಿದೆ ಪ್ರಾಣ-ಚಕ್ರ- ಕುಂಡಲಿನಿ ಜಾಗೃತಗೊಳಿಸುವ ಸಾಮರ್ಥ್ಯ

sudina
Published on
 ಯೋಗಿ ಸ್ವಾಮಿ ಸತ್ಯಾನಂದ ಸರಸ್ವತಿಯವರು ‘ಬಿಹಾರ್ ಸ್ಕೂಲ್ ಆಫ್ ಯೋಗ ಮತ್ತು ಅಂತಾರಾಷ್ಟ್ರೀಯ ಯೋಗ ಫೆಲೋಶಿಪ್ ಸಂಸ್ಥೆ’ಯ ಸ್ಥಾಪಕರು. ಇವರು ಮುದ್ರೆಯ ಕುರಿತು ವೈಜ್ಞಾನಿಕ

ವಾಗಿ ತಿಳಿಸಿದ್ದಾರೆ. ಸಂಸ್ಕೃತದ ಮುದ್ರಾ ಎಂಬ ಪದವನ್ನು ಸಂಜ್ಞೆ ಅಥವಾ ‘ಭಾವಾಭಿವ್ಯಕ್ತಿ’ ಎಂದು ಅರ್ಥೈಸಲಾಗಿದೆ. ಮುದ್ರೆಗಳನ್ನು ಮಾನಸಿಕ, ಭಾವನಾತ್ಮಕ, ಭಕ್ತಿಯ ಹಾಗೂ ಕಲಾತ್ಮಕ ಸಂಜ್ಞೆ ಅಥವಾ ಭಾವಾಭಿವ್ಯಕ್ತಿಗಳು ಎಂದು ವಿವರಿಸಿದ್ದಾರೆ. ಯೋಗಿಗಳು ಮುದ್ರೆಗಳನ್ನು ಶಕ್ತಿ ಪ್ರವಹಿಸುವಿಕೆಯ ಮನೋಭಾವದವುಗಳೆಂದು ಮತ್ತು ಅವು ವೈಯಕ್ತಿಕ ಪ್ರಾಣಚೈತನ್ಯವನ್ನು ವಿಶ್ವಚೈತನ್ಯದೊಂದಿಗೆ ಸೇರಿಸುವ ಉದ್ದೆಶಹೊಂದಿದೆಯೆಂದು ಅನುಭವದಿಂದ ಕಂಡುಕೊಂಡಿದ್ದಾರೆ. ‘ಕುಲಾರ್ಣವ ತಂತ್ರ’ ಎಂಬ ಗ್ರಂಥದಲ್ಲಿ ಮುದ್ರಾ ಎಂಬ ಪದದ ಮೂಲವನ್ನು ಹೀಗೆ ವಿವರಿಸಲಾಗಿದೆ: ‘ಮುದ್’ ಎಂಬ ಮೂಲ ಪದದ ಅರ್ಥ ಹರ್ಷ ಅಥವಾ ಸಂತೋಷ ಮತ್ತು ‘ದ್ರವಯ್’ ಎಂದರೆ ಹೊರಸೆಳೆಯುವುದು. ಮುದ್ರಾ ಎಂಬುದನ್ನು ಮೊಹರು, ಹತ್ತಿರದ ದಾರಿ ಅಥವಾ ವರ್ತಲದ ಉಪಮಾರ್ಗ ಎಂದೂ ವಿವರಿಸಿದ್ದಾರೆ.

ಮುದ್ರೆಗಳು ಮನಸ್ಥಿತಿ, ಮನೋಭಾವ ಮತ್ತು ಗ್ರಹಿಕೆಯನ್ನು ಬದಲಾಯಿಸುವ ಹಾಗೂ ಜಾಗೃತಿ, ಏಕಾಗ್ರತೆಗಳನ್ನು ಗಾಢವಾಗಿ ಸುವ ಸೂಕ್ಷ್ಮ ದೈಹಿಕ ಚಲನೆಗಳಾಗಿವೆ. ಮುದ್ರೆಯು ಆಸನ, ಪ್ರಾಣಾಯಾಮ, ಬಂಧ, ದರ್ಶನ ವಿಧಾನಗಳ ಸಂಯೋಜನೆಯಲ್ಲಿ ಇಡೀ ದೇಹವನ್ನು ಒಳಗೊಳ್ಳಬಹುದು ಅಥವಾ ಅದು ಸರಳವಾದ ಹಸ್ತಭಂಗಿ ಮಾತ್ರ ಆಗಿರಬಹುದು. ‘ಹಠಯೋಗ ಪ್ರದೀಪಿಕಾ’ ಮತ್ತು ಇನ್ನಿತರ ಯೋಗ ಗ್ರಂಥಗಳು ಮುದ್ರೆಯನ್ನು ಯೋಗಾಂಗ ಅಂದರೆ ಯೋಗದ ಒಂದು ಸ್ವತಂತ್ರ ಶಾಖೆ ಎಂದು ಪರಿಗಣಿಸಿವೆ. ಆಸನ ಪ್ರಾಣಾಯಾಮ ಮತ್ತು ಬಂಧಗಳಲ್ಲಿ ಸಾಕಷ್ಟು ಪರಿಣತಿ ಸಾಧಿಸಿದ ನಂತರ ಮತ್ತು ಕೆಲವು ಸ್ಥೂಲ ಅಡಚಣೆಗಳು ನಿವಾರಣೆಯಾದ ನಂತರ ಮುದ್ರೆಗಳನ್ನು ಪರಿಚಯಿಸಲಾಗುತ್ತದೆ.

ಪ್ರಾಚೀನಕಾಲದಿಂದ ಇಂದಿನವರೆಗೂ ವಿವಿಧ ಗ್ರಂಥಗಳಲ್ಲಿ ಮುದ್ರೆಗಳನ್ನು ಕುರಿತು ವಿವರಿಸಲಾಗಿದೆ. ಮುದ್ರೆಗಳು ಪ್ರಾಣ, ಚಕ್ರ ಹಾಗೂ ಕುಂಡಲಿನಿಗಳನ್ನು ಜಾಗೃತಗೊಳಿಸುವ ಸಾಧನಗಳಾಗಿವೆ. ಮತ್ತು ಮುಂದುವರಿದ ಅಭ್ಯಾಸಿಗರಿಗೆ ಇವು ಹೆಚ್ಚಿನ ಸಿದ್ಧಿಗಳನ್ನು ಹಾಗೂ ಮಾನಸಿಕ ಶಕ್ತಿಗಳನ್ನು ನೀಡಬಲ್ಲವು.

ಮುದ್ರೆಗಳು ಮತ್ತು ಪ್ರಾಣ: ಮುದ್ರೆಗಳ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲಾಗುವ ಭಾವಸ್ಥಿತಿಗಳು ಹಾಗೂ ಭಂಗಿಗಳು ಅನ್ನಮಯ ಕೋಶ (ಭೌತಿಕ ಶರೀರ), ಪ್ರಾಣಮಯ ಕೋಶ (ಪ್ರಾಣಕೋಶ)ಗಳ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುತ್ತವೆ. ಆರಂಭದಲ್ಲಿ ಇದು ಅಭ್ಯಾಸಿಗರಿಗೆ ಶರೀರದಲ್ಲಿ ಪ್ರಾಣ ಪ್ರವಹಿಸುವುದರ ಬಗ್ಗೆ ಅರಿವನ್ನು ಬೆಳೆಸುತ್ತದೆ. ಅಂತಿಮವಾಗಿ ಇದು ಬೇರೆ ಬೇರೆ ಕೋಶಗಳ ನಡುವೆ ಪ್ರಾಣದ ಸಂತುಲನೆಯನ್ನುಂಟು ಮಾಡುತ್ತದೆ. ಹಾಗೂ ಸೂಕ್ಷ್ಮ ಚೈತನ್ಯವನ್ನು ಮೇಲಿನ ಚಕ್ರಗಳತ್ತ ತಿರುಗಿಸಿ, ಉನ್ನತ ಮಟ್ಟದ ಪ್ರಜ್ಞೆಯನ್ನು ಉಂಟುಮಾಡುತ್ತದೆ.

ಬೆಳಕು ಅಥವಾ ಶಬ್ದದ ಅಲೆಗಳ ರೂಪದ ಚೈತನ್ಯವನ್ನು ಒಂದು ಕನ್ನಡಿ ಅಥವಾ ಶಿಖರಮುಖವು ಯಾವ ರೀತಿ ಪ್ರತಿಫಲಿಸುತ್ತದೋ ಅದೇ ರೀತಿ ಮುದ್ರೆಗಳು ಪ್ರಾಣವನ್ನು ನಿರ್ವಹಿಸುತ್ತವೆ. ದೇಹದಿಂದ ಸಾಮಾನ್ಯವಾಗಿ ಹೊರಸೂಸುವ ಪ್ರಾಣವನ್ನು ನಾಡಿ ಹಾಗೂ ಚಕ್ರಗಳು ದೇಹದಿಂದ ಹೊರಕ್ಕೆ ಪಸರಿಸುವಂತೆ ಮಾಡುತ್ತವೆ. ಆದರೆ ಮುದ್ರೆಗಳನ್ನು ಅಭ್ಯಸಿಸುವುದರಿಂದ ಚೈತನ್ಯವು ಹೊರಹೋಗದಂತೆ ದೇಹದಲ್ಲಿಯೇ ಅಡ್ಡಕಟ್ಟುಗಳು ನಿರ್ವಿುತವಾಗಿ ಚೈತನ್ಯವು ದೇಹದೊಳಕ್ಕೆ ಮತ್ತೆ ತಿರುಗಿಸಲ್ಪಡುತ್ತದೆ. ಉದಾಹರಣೆಗೆ ಷಣ್ಮುಖಿ ಮುದ್ರೆಯಲ್ಲಿ ಬೆರಳುಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡಾಗ ಕಣ್ಣುಗಳ ಮೂಲಕ ಹೊರ ಸೂಸುತ್ತಿದ್ದ ಚೈತನ್ಯವು ಪುನಃ ಹಿಂದಕ್ಕೆ ಪ್ರತಿಫಲಿತವಾಗುತ್ತದೆ. ಅದೇ ರೀತಿಯಲ್ಲಿ, ವಜ್ರನಾಡಿಯಿಂದ ಹೊರಸೂಸಲ್ಪಡುವ ಲೈಂಗಿಕ ಚೈತನ್ಯವು ವಜ್ರೋಲಿ ಮುದ್ರೆಯ ಅಭ್ಯಾಸದಿಂದ ಮಿದುಳಿನತ್ತ ಹಿಂದಕ್ಕೆ ತಿರುಗಿಸಲ್ಪಡುತ್ತದೆ. ತಂತ್ರಶಾಸ್ತ್ರದ ಪ್ರಕಾರ ಚದುರಲ್ಪಟ್ಟ ಪ್ರಾಣವನ್ನು ಮುದ್ರೆ

ಗಳ ಅಭ್ಯಾಸದಿಂದ ಹಿಡಿದಿರಿಸಲು ಸಾಧ್ಯವಾದಾಗ ಮನಸ್ಸು ಅಂತಮುಖಿ ಯಾಗುತ್ತದೆ. ಇದು ಪ್ರತ್ಯಾಹಾರವನ್ನು ಅಂದರೆ ಇಂದ್ರಿಯ ಸಂವೇದನೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಧಾರಣ ಅಂದರೆ ಏಕಾಗ್ರತೆಯನ್ನು ಸಾಧ್ಯವಾಗಿಸುತ್ತದೆ. ಮುದ್ರೆಗಳಿಗೆ ಪ್ರಾಣವನ್ನು ಪುನರ್ ನಿರ್ದೇಶಿಸುವ ಸಾಮರ್ಥ್ಯ ಇರುವುದರಿಂದ ಅವು ಕುಂಡಲಿನಿಯನ್ನು ಜಾಗೃತಗೊಳಿಸಲು ಬಹುಮುಖ್ಯ ವಿಧಾನಗಳಾಗಿವೆ. ಆದ್ದರಿಂದ ಕ್ರಿಯಾ ಮತ್ತು ಕುಂಡಲಿನಿ ಯೋಗಾಭ್ಯಾಸಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಮುದ್ರೆಗಳ ಕುರಿತು ವೈಜ್ಞಾನಿಕ ದೃಷ್ಟಿ: ಮುದ್ರೆಗಳು ಮಿದುಳಿನ ಕಾಂಡದ ಸುತ್ತಲಿನ ಮೂಲಸ್ಥಳಗಳಲ್ಲಿ ಹುಟ್ಟಿದ ಸುಪ್ತಪ್ರಜ್ಞೆಯ ಸ್ಪಂದನಗಳನ್ನು ಹಾಗೂ ಆದಿಮೂಲ ಪ್ರವೃತ್ತಿಯ ಸ್ವಭಾವ ಪ್ರಕಾರಗಳನ್ನು ತಲುಪುವ ಹಾಗೂ ಅವುಗಳ ಮೇಲೆ ಪ್ರಭಾವ ಬೀರುವ ಮಾರ್ಗಗಳಾಗಿವೆ. ಅವು ಈ ಪ್ರದೇಶಗಳೊಂದಿಗೆ ಒಂದು ಸೂಕ್ಷ್ಮವಾದ ಸಂಪರ್ಕವನ್ನು ಕಲ್ಪಿಸುತ್ತದೆ. ಪ್ರತಿಯೊಂದು ಮುದ್ರೆಯೂ ಅದಕ್ಕನುಗುಣವಾಗಿ ದೇಹ, ಮನಸ್ಸು ಹಾಗೂ ಪ್ರಾಣಗಳ ಮೇಲೆ ಬೇರೆ ಬೇರೆ ರೀತಿಯ ಪ್ರಭಾವವನ್ನು ಹೊಂದಿದೆ.

( ಪ್ರತಿಕ್ರಿಯಿಸಿ:vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net