

ಸಾಗರ: ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಗ್ರಂಥಗಳ ಅಗತ್ಯ ಹೆಚ್ಚು ಇದೆ. ನಮ್ಮ ಪೂರ್ವಿಕರು ನಡೆಸಿಕೊಂಡು ಬರುತ್ತಿದ್ದ ಪೂಜಾ ವಿಧಿಗಳನ್ನು ನಾವು ಅನುಸರಿಸಿಕೊಂಡು ಹೋಗಲು ಲಿಖಿತ ಗ್ರಂಥಗಳು ಬೇಕು ಎಂದು ವರದಹಳ್ಳಿ ಶ್ರೀಧರ ಸೇವಾ ಮಹಾಮಂಡಲದ ಕಾರ್ಯದರ್ಶಿ ಕೆ.ವಿ.ಶ್ರೀಧರ ಹೆಗಡೆ ಹೇಳಿದರು.
ಸಾಗರದ ಕಾನ್ಲೆ ಛತ್ರದ ದತ್ತಾತ್ರೇಯ ದೇವಸ್ಥಾನದಲ್ಲಿ ಗೀರ್ವಾಣ ಭಾರತಿ ಟ್ರಸ್ಟ್‌ನಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಂತ ಭಟ್ ಮೂರುಕಟ್ಟಾ ಅವರ ಸಂಪಾದಕತ್ವದ ‘ಮಹಾಲಕ್ಷ್ಮೀ ಮಿಶ್ರ ಪೂಜಾ ವಿಧಿಃ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಒತ್ತಡದ ಸಮಯದಲ್ಲಿ ವ್ರತ, ಪೂಜೆಗಳನ್ನು ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಲಿಖಿತ ರೂಪದ ದಾಖಲೆಗಳಿದ್ದರೆ ಪೂಜೆ ಮಾಡುವುದು ಸುಲಭವಾಗುತ್ತದೆ. ಧಾರ್ಮಿಕ ಕಾರ್ಯಗಳ ಮೇಲೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ ಪೂಜೆ ಮಾಡಲು ವಿಧಿವಿಧಾನಗಳ ಪುಸ್ತಕಗಳು ಸಿಗುತ್ತಿಲ್ಲ ಎಂದರು.
ಟ್ರಸ್ಟ್ ಅಧ್ಯಕ್ಷ ಸಿ.ಎಂ.ಸುಬ್ರಹ್ಮಣ್ಯ, ಗೀರ್ವಾಣ ಭಾರತಿ ಸಂಸ್ಕೃತ ಸಂಸ್ಥೆಯು ವೇದಾಧ್ಯಯನ ಪ್ರೋತ್ಸಾಹಿಸುವ ಜತೆಗೆ ವೇದ, ಉಪನಿಷತ್ತುಗಳನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದೆ. ಧಾರ್ಮಿಕ ಗ್ರಂಥಗಳನ್ನು ಲೋಕಾರ್ಪಣೆ ಮಾಡುವ ಜತೆಗೆ ಕೃತಿಕಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ಎಂ.ಎ.ಗೌತಮ್, ಮಧು, ಅಚ್ಚುತರಾವ್, ಐ.ವಿ.ಹೆಗಡೆ, ಶೇಷಗಿರಿ ಹೆಗಡೆ, ಲಕ್ಷ್ಮೀನಾರಾಯಣ ಭಟ್, ಭಾರ್ಗವ ಬಾಪಟ್ ಇತರರಿದ್ದರು.