

ನವದೆಹಲಿ: ಕೋವಿಡ್ -19 ವೈರಸ್ ರೂಪಾಂತರಗೊಂಡು ಅದರ ಬೇರೆ ಬೇರೆ ವೇರಿಯಂಟ್ಗಳು ಆತಂಕವನ್ನು ಹೆಚ್ಚಿಸಿದಂತೆ ಇದೀಗ ಕರೊನಾದ ಮತ್ತೊಂದು ವೇರಿಯಂಟ್ ಕುರಿತು ತಲೆ ಕೆಡಿಸಿಕೊಳ್ಳುವಂತಾಗಿದೆ. 'ಡೆಲ್ಟಾ ಪ್ಲಸ್' ಎನ್ನಲಾದ ಈ ವೇರಿಯಂಟ್ ಈಗ ಗಂಭೀರಾಗಿ ಪರಿಣಮಿಸಿದ್ದು, ಈ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವಂತೆ ಮಾಡಿದೆ.
ಈಗಾಗಲೇ ಗುರುತಿಸಲಾಗಿರುವ ಗಾಮಾ ಹಾಗೂ ಬೀಟಾ ವೇರಿಯಂಟ್ನ ಮುಂದುವರಿದ ರೂಪಾಂತರಿ ಇದಾಗಿದ್ದು, ಇದನ್ನು ಕೆ417ಎನ್ ಎಂದು ಕರೆಯಲಾಗುತ್ತಿದೆ. ಕರೊನಾದ ಇತರ ವೇರಿಯಂಟ್ಗಳಿಗಿಂತ ಇದು ಅಧಿಕ ಸೋಂಕುಕಾರಕವಾಗಿದ್ದು, ಲಸಿಕೆ ಹಾಕಿಸಿಕೊಂಡಿದ್ದರೂ ದುಷ್ಪರಿಣಾಮ ಬೀರಬಹುದು ಎಂಬ ಮಾಹಿತಿ ಹೊರಬಿದ್ದಿದೆ.
ಔಷಧ ಕಂಪನಿಗಳು ಲಸಿಕೆ ತಯಾರಿಕೆಗೆ ಬಳಸಿದ ಮಾದರಿಗಿಂತ ಇವು ವಿಭಿನ್ನವಾಗಿರುವುದರಿಂದ, ಲಸಿಕೆ ಈ ವೇರಿಯಂಟ್ ಮೇಲೆ ಪರಿಣಾಮಕಾರಿ ಆಗಿರಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಈಗಿನ ಆ್ಯಂಟಿಬಾಡಿಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಈ ಹೊಸ ವೇರಿಯಂಟ್ಗೆ ಇದೆ ಎನ್ನಲಾಗುತ್ತಿದೆ. ಮೇ ಅಂತ್ಯದ ಅವಧಿಯಲ್ಲಿ ಪರೀಕ್ಷಿಸಲಾದ ಮಾದರಿಗಳ ಪೈಕಿ ಶೇ. 31ರಷ್ಟರಲ್ಲಿ ಈ ವೇರಿಯಂಟ್ ಕಂಡುಬಂದಿದೆ. ಇನ್ನು ಇದರ ವಿರುದ್ಧ ಲಸಿಕೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)