ಸಕ್ಕರೆ ಹೊದಿಕೆಯಲ್ಲಿ ಅವಿತು ದೇಹ ಪ್ರವೇಶಿಸುವ ಕರೊನಾ ಕುರಿಯ ವೇಷದ ತೋಳ ಈ ವೈರಸ್​

corona Unmasked
Published on

ಲಂಡನ್​: ಕರೊನಾ ವೈರಸ್​ ಎಂದ ಕೂಡಲೇ ದುಂಡಗಿನ, ಮೈತುಂಬ ಮುಳ್ಳನ್ನೇ ಹೊದ್ದುಕೊಂಡಿರುವ, ಆ ಮುಳ್ಳಿನ ತುದಿಯಲ್ಲಿ ಕಿರೀಟದಂತೆ ರಚನೆಯಿರುವ ಚಿತ್ರವನ್ನು ಎಲ್ಲ ಮಾಧ್ಯಮಗಳಲ್ಲೂ ತೋರಿಸಲಾಗುತ್ತದೆ.

ಆದರೆ, ಈ ವೈರಸ್​ ದೇಹ ಸೇರಿಕೊಳ್ಳುವುದು ಹೇಗೆ? ಬಳಿಕ ಅಲ್ಲಿನ ಪ್ರತಿರೋಧಕ ಶಕ್ತಿಯನ್ನು ಅಥವಾ ರೋಗ ನಿರೋಧಕ ಶಕ್ತಿಯನ್ನು ಹೇಗೆ ಬೇಧಿಸುತ್ತದೆ ಅಥವಾ ಕಾಯಿಲೆಯ ಯಾವುದೇ ಗುಣಲಕ್ಷಣಗಳನ್ನು ತೋರಿಸದೇ ಅಲ್ಲಿಯೇ ಹೇಗೆ ಉಳಿದುಕೊಳ್ಳುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಬ್ರಿಟನ್ನಿನ ಸೌತ್​ ಹ್ಯಾಂಪ್ಟನ್​ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದರ ಮೂರು ಆಯಾಮಗಳ (ತ್ರೀಡಿ) ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. 'ಕುರಿಯ ವೇಷ ಧರಿಸಿ ದೇಹ ಪ್ರವೇಶಿಸುವ ತೋಳ' ಎಂದು ಕರೊನಾ ವೈರಸ್​ಅನ್ನು ಬಣ್ಣಿಸಿದ್ದಾರೆ.

ಇಷ್ಟಕ್ಕೂ ದೇಹದಲ್ಲಿ ಈ ವೈರಸ್​ ಅವಿತಿರುವುದು ಗೊತ್ತಾಗದೇ ಇರಲು ಕಾರಣ ತನ್ನ ಮೇಲ್ಮೈಗೆ ಸಕ್ಕರೆ ಮಾಲಿಕ್ಯೂಲ್​ಗಳನ್ನು ಈ ವೈರಸ್​ ಅಂಟಿಸಿಕೊಂಡಿರುತ್ತದೆ. ಹೀಗಾಗಿ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬೇಧಿಸಿ ಪ್ರವೇಶಿಸಲು ಇದಕ್ಕೆ ಸಾಧ್ಯವಾಗುತ್ತದೆ. ಸಾರ್ಸ್​-ಸಿಒವಿ-2 ಎಂದು ಕರೆಯಲಾಗುವ ಈ ವೈರಸ್​ ಎಚ್​ಐವಿ ಹಾಗೂ ಇತರ ವೈರಸ್​ಗಳಷ್ಟು ನಿಗೂಢವೇನಲ್ಲ. ಸದ್ಯ ಇದರ ಸ್ವರೂಪದ ಬಗ್ಗೆ ತಿಳಿದುಬಂದಿರುವುದರಿಂದ ಆಗಿರುವ ಬಹುದೊಡ್ಡ ಪ್ರಯೋಜನವೆಂದರೆ ಇದನ್ನು ಮಣಿಸಲು ಔಷಧ ಕಂಡುಹಿಡಿಯುವಲ್ಲಿ ಈ ಸಂಶೋಧನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅನ್ವೇಷಕರು ಹೇಳಿದ್ದಾರೆ.

ಇಡೀ ಜಗತ್ತೇ ಪ್ರಸ್ತುತ ಕರೊನಾ ಕಪಿಮುಷ್ಠಿಗೆ ಸಿಲುಕಿದೆ. ಈ ಹೊತ್ತಿನಲ್ಲಿ ಇದರ ಬಗ್ಗೆ ಹೊಸ ವಿಷಯಗಳು ಗೊತ್ತಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಮಾನವ ದೇಹದ ಪ್ರತಿರೋಧಕ ಶಕ್ತಿಯಿಂದ ಈ ವೈರಸ್​ ಯಾವ ರೀತಿ ಅವಿತುಕೊಳ್ಳುತ್ತದ ಎಂಬುದನ್ನು ಇದರ ತ್ರೀಡಿ ಚಿತ್ರದ ಮೂಲಕ ವಿಜ್ಞಾನಿಗಳು ವಿಶದವಾಗಿ ವಿವರಿಸಿದ್ದಾರೆ. ಇಂಥದ್ದೊಂದು ಸಂಶೋಧನೆ ಇದೇ ಮೊದಲ ಬಾರಿಗೆ ನಡೆದಿದೆ.

ದೇಹದಲ್ಲಿ ಅವಿತುಕೊಳ್ಳುವುದು ಹೇಗೆ?: ಸಾರ್ಸ್​-ಸಿಒವಿ-2 ಎಂದು ಕರೆಯಲಾಗುವ ಈ ವೈರಸ್​ ಮುಳ್ಳಿನ ರಚನೆಗಳನ್ನು ಹೊಂದಿದೆ. ಇವುಗಳಿಂದಲೇ ಅದು ಜೀವಕೋಶಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಪ್ರವೇಶ ಮಾಡುತ್ತದೆ. ಈ ಮುಳ್ಳುಗಳಿಗೆ ಸಕ್ಕರೆ ಹೊದಿಕೆಯಿರುತ್ತದೆ. ಇದನ್ನು ಗ್ಲೈಕಾನ್​ ಎಂದು ಕರೆಯಲಾಗುತ್ತದೆ. ಇದು ದೇಹದ ಪ್ರತಿಬಂಧಕ ಶಕ್ತಿಯನ್ನು ವಂಚಿಸಿ, ಒಳಗೆ ಪ್ರವೇಶಿಸಲು ಸಹಾಯ ಮಾಡುತ್ತವೆ. ಆದರೆ, ಇದರ ಪ್ರಮಾಣ ಕಡಿಮೆಯಿರುತ್ತದೆ. ಹೀಗಾಗಿ ಇದನ್ನು ನಿವಾರಣೆ ಮಾಡುವುದು ಕಷ್ಟವೇನಲ್ಲ ಎನ್ನುತ್ತಾರೆ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ.ಮ್ಯಾಕ್ಸ್​ ಕ್ರಿಸ್ಪಿನ್​. ಎಚ್​ಐವಿಗೆ ಲಸಿಕೆ ತಯಾರಿಸುವ ಸಂಶೋಧನೆಗಾಗಿ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನ ಈ ಹಿಂದೆ ನೀಡಿದ್ದ ಅನುದಾನದಿಂದ ಖರೀದಿಸಲಾಗಿದ್ದ ಸಾಧನಗಳನ್ನು ಬಳಸಿ ಈ ಸಂಶೋಧನೆಯನ್ನು ಮಾಡಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net