

ಲಂಡನ್: ಕರೊನಾ ಸೋಂಕು ಪತ್ತೆ ಬೇಗ ಆದಷ್ಟೂ, ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಟೆಸ್ಟ್ ಮಾಡಲು ಸಾಧ್ಯವಾದಷ್ಟೂ ಸೋಂಕು ಹರಡುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಯಬಹುದು. ಆ ನಿಟ್ಟಿನಲ್ಲಿ ಈ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದೆ. ಸದ್ಯ ಈ ಪರೀಕ್ಷೆಯಲ್ಲಿ 20 ನಿಮಿಷಗಳಲ್ಲಿ ಫಲಿತಾಂಶ ಗೊತ್ತಾಗುತ್ತಿದೆ. ಆದರೆ ಇದೀಗ ಐದೇ ನಿಮಿಷದೊಳಗೆ ಸೋಂಕು ಪತ್ತೆ ಹಚ್ಚುವಂಥ ಪರೀಕ್ಷೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಬ್ರಿಟನ್ನ ಆಕ್ಸ್ಫರ್ಡ್ ಯುನಿವರ್ಸಿಟಿಯ ವಿಜ್ಞಾನಿಗಳು ಈ ಕ್ಷಿಪ್ರ ಫಲಿತಾಂಶದ ಪರೀಕ್ಷೆಯನ್ನು ಕಂಡು ಹಿಡಿದಿದ್ದಾರೆ. ಈ ವಿಧಾನದ ಮೂಲಕ ವಿಮಾನ ನಿಲ್ದಾಣಗಳಲ್ಲಿ ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಸೋಂಕನ್ನು ಅತಿ ಬೇಗ ಪತ್ತೆ ಹಚ್ಚಲು ಸಾಧ್ಯ ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮ ಈ ಪರೀಕ್ಷಾ ವಿಧಾನ ವೈರಸನ್ನು ಅತಿ ಬೇಗ ಪತ್ತೆ ಮಾಡುತ್ತದೆ ಹಾಗೂ ಇದು ಸರಳ, ಅತಿಶೀಘ್ರ ಮತ್ತು ಕಡಿಮೆ ಖರ್ಚಿನದ್ದಾಗಿದೆ ಎಂದು ಆಕ್ಸ್ಫರ್ಡ್ ಡಿಪಾರ್ಟ್ಮೆಂಟ್ ಆಫ್ ಫಿಸಿಕ್ಸ್ನ ಪ್ರೊಫೆಸರ್ ಅಚಿಲೆಸ್ ಕಪಾನಿಡಿಸ್ ಹೇಳಿದ್ದಾರೆ.
ಈ ಪರೀಕ್ಷಾ ವಿಧಾನದ ಉಪಕರಣವನ್ನು ಸದ್ಯದಲ್ಲೇ ಉತ್ಪಾದಿಸಲು ಮುಂದಾಗಿರುವ ವಿಜ್ಞಾನಿಗಳು, 2021ರ ವರ್ಷಾರಂಭದ ವೇಳೆಗೆ ಮಾರುಕಟ್ಟೆಗೆ ಬಿಡುವ ಗುರಿ ಇರಿಸಿಕೊಂಡಿದ್ದಾರೆ. ತರಾತುರಿಯಲ್ಲಿ ಬಿಡುಗಡೆ ಮಾಡಿದರೆ ಸೃಷ್ಟಿಯಾಗುವ ದೊಡ್ಡ ಬೇಡಿಕೆಯನ್ನು ಪೂರೈಸಲು ಸಾಧ್ಯವಿರದ್ದರಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿಕೊಂಡೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್)