ಕರೊನಾ ಕುರಿತು ಹೊರಹೊಮ್ಮಿತು ಆತಂಕಕಾರಿ ಮಾಹಿತಿ; ವುಹಾನ್​ ಪ್ರಯೋಗಾಲಯದಲ್ಲಿದ್ದ ವಿಜ್ಞಾನಿಯಿಂದಲೇ ಬಹಿರಂಗ!

Wuhan
Published on

ನವದೆಹಲಿ: ಜಗತ್ತಿನಾದ್ಯಂತ ಇನ್ನೂ ಸಂಪೂರ್ಣವಾಗಿ ಸದ್ದಡಗದ ಕರೊನಾ ಕುರಿತು ಇದೀಗ ಆತಂಕಕಾರಿ ಮಾಹಿತಿಯೊಂದು ಹೊರಹೊಮ್ಮಿದೆ. ಅದರಲ್ಲೂ ಕರೊನಾದ ಮೂಲ ಎನ್ನಲಾದ ಚೀನಾದ ವುಹಾನ್​ನಲ್ಲಿ ಪ್ರಯೋಗಾಲಯದ ವಿಜ್ಞಾನಿಯಿಂದಲೇ ಇಂಥದ್ದೊಂದು ಮಾಹಿತಿ ಬಹಿರಂಗಗೊಂಡಿದೆ.

ಚೀನಾದ ವುಹಾನ್​ನಲ್ಲಿನ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದ ಯುಎಸ್ ಮೂಲದ ವಿಜ್ಞಾನಿ ಆ್ಯಂಡ್ಯೂ ಹಫ್, ಕರೊನಾ ವೈರಸ್ ಮಾನವನಿರ್ಮಿತ ಹಾಗೂ ಅದು ವುಹಾನ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ (ಡಬ್ಲ್ಯುಐವಿ) ಕೇಂದ್ರದಿಂದಲೇ ಹೊರಹೊಮ್ಮಿದ್ದು ಎಂದು ಹೇಳಿದ್ದಾರೆ. 'ದ ಟ್ರುಥ್ ಎಬೌಟ್ ವುಹಾನ್' ಎಂಬ ಅವರ ಇತ್ತೀಚಿನ ಪುಸ್ತಕದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾಗಿ ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ. ಚೀನಾದಲ್ಲಿನ ಕರೊನಾ ವೈರಸ್​ಗೆ ಯುಎಸ್ ಸರ್ಕಾರ ಫಂಡ್ ಮಾಡಿತ್ತು.

ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್​ನ ನಾನ್ ​ಫ್ರಾಫಿಟ್​ ಸಂಸ್ಥೆಯಾದ ಇಕೋ ಹೆಲ್ತ್ ಅಲಯನ್ಸ್​ ಮಾಜಿ ಉಪಾಧ್ಯಕ್ಷ ಆ್ಯಂಡ್ಯೂ ಹಫ್ ಈ ಮಾಹಿತಿ ಹೊರಗೆಡಹಿದ್ದಾರೆ. ಚೀನಾದಲ್ಲಿ ನಡೆದ ಸಂಶೋಧನೆ ವೇಳೆ ಸೂಕ್ತ ಸುರಕ್ಷತೆ ವಹಿಸದ್ದರಿಂದ ವುಹಾನ್ ಲ್ಯಾಬ್​ನಿಂದ ವೈರಸ್ ಲೀಕ್ ಆಗಿತ್ತು ಎಂದು ಅವರು ತಿಳಿಸಿದ್ದಾರೆ.

ಚೀನಾ ಸರ್ಕಾರಕ್ಕೆ ಮೊದಲ ದಿನದಿಂದಲೂ ಈ ಬಗ್ಗೆ ಗೊತ್ತಿತ್ತು. ಚೀನಾಗೆ ಅಪಾಯಕಾರಿ ಬಯೋಟೆಕ್ನಾಲಜಿ ಕೊಟ್ಟಿದ್ದೇ ಯುಎಸ್​ ಸರ್ಕಾರ. ಅವರಿಗೆ ನಾವು ಜೈವಿಕ ಅಸ್ತ್ರ ತಂತ್ರಜ್ಞಾನ ಕೊಟ್ಟಿದ್ದೆವು, ಅಂದು ನಡೆದಿದ್ದನ್ನು ನೋಡಿ ನಾವೇ ಭಯಗೊಂಡಿದ್ದೆವು ಎಂಬುದಾಗಿ ಆ್ಯಂಡ್ರೂ ಹಫ್ ದ ಸನ್​ಗೆ ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net