ಪೂರ್ವಜರ ಬದುಕಿನ ವೈಜ್ಞಾನಿಕ ಅಧ್ಯಯನ ಅಗತ್ಯ

kuvempu vv programme
ಕುವೆಂಪು ವಿಶ್ವವಿದ್ಯಾಲಯದಲ್ಲಿ ಜೈವಿಕ ಶೋಧನೆ ವಿಷಯ ಕುರಿತ ಕಾರ್ಯಾಗಾರವನ್ನು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಿದರು. ಐಎಂಎ ಜಿಲ್ಲಾಧ್ಯಕ್ಷ ಡಾ. ಎಸ್.ಶ್ರೀಧರ್, ಪ್ರೊ. ರಮೇಶ್, ಪ್ರೊ. ಶ್ರೀನಿವಾಸ್, ಪ್ರೊ. ಕೆ.ಎಸ್.ಗಿರೀಶ್ ಇತರರಿದ್ದರು.
Published on

ಶಿವಮೊಗ್ಗ: ಆಧುನಿಕ ಯುಗದ ಜೀವನಶೈಲಿಯಲ್ಲಿ ಪ್ರತಿ ಕಾರ್ಯಕ್ಕೂ ರಾಸಾಯನಿಕಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ನಮ್ಮ ಪೂರ್ವಜರು ರಾಸಾಯನಿಕಗಳನ್ನು ಬಳಸದೆ ಜೈವಿಕವಾಗಿ ಬದುಕಿ ತೋರಿಸಿದ್ದರು. ಪೂರ್ವಜರ ಬದುಕಿನ ವೈಜ್ಞಾನಿಕ ಅಧ್ಯಯನ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಹಾಗೂ ನವದೆಹಲಿಯ ಡಿಎಸ್‌ಟಿ-ಎಸ್‌ಇಆರ್‌ಬಿ ಸಹಭಾಗಿತ್ವದಲ್ಲಿ ಮ್ಯೂಕೋರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್) ಮೇಲೆ ಔಷಧೀಯ ಸಸ್ಯಗಳ ಮತ್ತು ಅವುಗಳ ಚಯಾಪಚಯ ಕ್ರಿಯೆಗಳ ಜೈವಿಕ ಶೋಧನೆ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕರೊನಾ ನಂತರ ಮ್ಯೂಕೋರ್ಮೈಕೋಸಿಸ್‌ನಿಂದ ಬಾಧಿತರಾಗಿ ರಾಜ್ಯಾದ್ಯಂತ ಹಲವು ಜನರು ಸಾವನ್ನಪ್ಪಿದ್ದರು. ನಿಯಂತ್ರಿಸುವ ಮತ್ತು ಪರಿಹಾರ ಹುಡುಕುವ ಉದ್ದೇಶದಿಂದ ಪಶ್ಚಿಮ ಘಟ್ಟಗಳಲ್ಲಿರುವ ಔಷಧೀಯ ಸಸ್ಯಗಳ ಕುರಿತು ಕುವೆಂಪು ವಿವಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಪ್ರೊ. ಬಿ.ತಿಪ್ಪೇಸ್ವಾಮಿ ಅವರು ಸಂಶೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕುವೆಂಪು ವಿವಿ ಹಣಕಾಸು ಅಧಿಕಾರಿ ಪ್ರೊ. ರಮೇಶ್, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ್, ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ. ಕೆ.ಎಸ್.ಗಿರೀಶ್, ಸೂಕ್ಷಾಣು ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಬಿ.ತಿಪ್ಪೇಸ್ವಾಮಿ, ಪ್ರೊ. ಎನ್.ಬಿ.ತಿಪ್ಪೇಸ್ವಾಮಿ, ಪ್ರೊ. ಶ್ರೀಶೈಲಾ, ಡಾ. ಜಿ.ಜೆ.ಸತೀಶ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ದೇಶ ವಿದೇಶಗಳಲ್ಲಿ ಬಹಳಷ್ಟು ಅವಕಾಶಗಳಿದ್ದು, ನಿರಂತರ ಪರಿಶ್ರಮ ಹಾಗೂ ಸಮರ್ಪಣಾ ಭಾವದಿಂದ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಭವಿಷ್ಯ ರೂಪಿಸಿಕೊಳ್ಳಬಹುದು. -ಡಾ. ಎಸ್.ಶ್ರೀಧರ್, ಐಎಂಎ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net