

ಬೆಂಗಳೂರು: ಕರೊನಾ ಎರಡನೇ ಅಲೆ ಕಟ್ಟಿಹಾಕಲು ಜಾರಿಗೊಳಿಸಿರುವ ಸಾರ್ವತ್ರಿಕ ಲಾಕ್ಡೌನ್ ಅವಧಿ ಮುಗಿಯಲು ಇನ್ನೂ ವಾರವಿರುವಂತೆಯೇ ಮೂರನೇ ಹಂತದಲ್ಲಿ ‘ವೈಜ್ಞಾನಿಕ ಲಾಕ್ಡೌನ್’ ಜಾರಿಗೊಳಿಸುವತ್ತ ಸರ್ಕಾರದ ಒಲವಿದೆ. ಕೇಂದ್ರ ಸರ್ಕಾರದ ಸೂಚನೆ ಪಾಲನೆ, ತಜ್ಞರ ಸಲಹೆ ಪರಿಗಣನೆ ಸೇರಿದಂತೆ ಆದ್ಯತೆ ಪ್ರಕಾರ ನಿರ್ದಿಷ್ಟ ವಲಯಗಳನ್ನು ಗುರುತಿಸಿ, ಕಠಿಣ ನಿರ್ಬಂಧ ಮುಂದುವರಿಸುವುದು ‘ವೈಜ್ಞಾನಿಕ ಲಾಕ್ಡೌನ್’ನ ತಿರುಳಾಗಿದೆ. ಈ ಮಧ್ಯೆ ಡಾ.ಎಂ.ಕೆ.ಸುದರ್ಶನ್ ನೇತೃತ್ವದ ತಜ್ಞರ ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೋಮವಾರ ಮಹತ್ವದ ವರದಿ ಸಲ್ಲಿಸಿದೆ. ಲಾಕ್ಡೌನ್ ಮುಂದುವರಿಸಬೇಕೆ? ಬೇಡವೆ? ಎಂಬ ಜಿಜ್ಞಾಸೆ, ಸಾರ್ವಜನಿಕ ಚರ್ಚೆಯ ಮಧ್ಯೆ ತಜ್ಞರ ವರದಿ ಸರ್ಕಾರದ ಕೈಸೇರಿದ್ದು, ಮುಂದಿನ ನಡೆ ಕುತೂಹಲ ಕೆರಳಿಸಿದೆ.
ತಜ್ಞರ ಸಲಹೆಗಳು: ದೈನಂದಿನ ಹೊಸ ಪ್ರಕರಣಗಳು 5,000 ಒಳಗೆ ಹಾಗೂ ಪಾಸಿಟಿವಿಟಿ ಶೇ.5ರ ಮಿತಿಗೆ ತಲುಪುವ ತನಕ ಲಾಕ್ಡೌನ್ ಮುಂದುವರಿಸಬೇಕು. ಈಗಿರುವ ಲಾಕ್ಡೌನ್ ಅವಧಿ ಮುಗಿದ ಬಳಿಕ ಮತ್ತೊಂದು ವಾರ ವಿಸ್ತರಿಸಿ, ಅಷ್ಟರೊಳಗೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದರೆ, ಹಂತ ಹಂತವಾಗಿ ಅನ್ಲಾಕ್ ಮಾಡಬಹುದು. ಶೇ.47ರಷ್ಟಿದ್ದ ಪಾಸಿಟಿವಿಟಿ ದರ ಶೇ.13ಕ್ಕೆ ಇಳಿದಿದ್ದರೂ ಸ್ಥಿರತೆ ಖಾತರಿಯಿಲ್ಲ. ಅಲ್ಲದೆ, ಮರಣ ಪ್ರಮಾಣ ಗಂಭೀರವಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಪ್ರತಿದಿನ ಹೊಯ್ದಾಟವಿದೆ. ಒಂದು ವಾರದೊಳಗೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ಖಾತರಿಯೂ ಇಲ್ಲ. ಸೆಪ್ಟಂಬರ್-ಅಕ್ಟೋಬರ್ನಲ್ಲಿ 3ನೇ ಅಲೆ ಪ್ರವೇಶಿಸುವ ಸಾಧ್ಯತೆಯಿದೆ. ಅದಕ್ಕೂ ಸಿದ್ಧತೆ ಅಗತ್ಯ ಇರುವ ಕಾರಣ ಲಾಕ್ಡೌನ್ ವಿಸ್ತರಿಸುವುದು ಲೇಸು ಎಂದು ಸಮಿತಿ ಸಲಹೆ ನೀಡಿದೆ.
ಯಾವ ಆಧಾರದಲ್ಲಿ ವರದಿ?: ದೈನಂದಿನ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚು ಹಾಗೂ ಆಕ್ಸಿಜನ್ ಬೆಡ್ ಪ್ರಮಾಣ ಶೇ.60ಕ್ಕಿಂತ ಹೆಚ್ಚು ಭರ್ತಿಯಾಗಿದ್ದರೆ ಕಠಿಣ ಕ್ರಮ ಜೂನ್ 30ರವೆರೆಗೆ ಮುಂದುವರಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿತ್ತು. ಈ ಸುತ್ತೋಲೆ ಹಾಗೂ ರಾಜ್ಯದ ಸದ್ಯದ ಸ್ಥಿತಿ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇನ್ನೊಂದು ಸಂಗತಿ ಎಂದರೆ ಪಾಸಿಟಿವಿಟಿ ದರ ಹಾಗೂ ಆಕ್ಸಿಜನ್ ಬೆಡ್ ಲಭ್ಯತೆ ರಾಜ್ಯದ ಬೇರೆ ಬೇರೆ ಕಡೆ ಒಂದೊಂದು ರೀತಿಯಲ್ಲಿ ಇದೆ. ಹೀಗಾಗಿ ಅನ್ಲಾಕ್ ಮಾಡಲು ಸರ್ಕಾರ ವೈಜ್ಞಾನಿಕ ಲಾಕ್ಡೌನ್ ಮೊರೆ ಹೋಗಲಿದೆ.
1. 38 ದಿನಗಳಿಂದ ವಿಧಿಸಿರುವ ಲಾಕ್ ಡೌನ್ನ ಸಂಪೂರ್ಣ ಲಾಭ ಪಡೆಯಬೇಕಾದರೆ ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.2. ಪ್ರಸ್ತುತ ರಾಜ್ಯದಲ್ಲಿನ ಪಾಸಿಟಿವಿಟಿ ದರ ಸರಾಸರಿ ಶೇ.13ಕ್ಕಿಂತ ಹೆಚ್ಚಿದ್ದು, ಪ್ರತಿ ದಿನದ ಸೋಂಕು ಪ್ರಕರಣಗಳ ಸಂಖ್ಯೆ 18 ಸಾವಿರಕ್ಕೂ ಹೆಚ್ಚಿವೆ. ಸಾವಿನ ದರ ಶೇ.2ಕ್ಕಿಂತ ಹೆಚ್ಚಿದೆ.3. ಜೂ.7ರ ವೇಳೆಗೆ ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಆಗುವ ಸಾಧ್ಯತೆಗಳು ತೀರಾ ಕಡಿಮೆ. ರಾಜ್ಯ ಹಾಗೂ ಜಿಲ್ಲಾವಾರು ಪ್ರಗತಿ ಪರಿಶೀಲನೆ ನಡೆಸುವಂತೆಯೂ ಸಮಿತಿ ಸೂಚಿಸಿದೆ.4. ಸೋಂಕು ಪ್ರಕರಣ, ಸಾವು ಹಾಗೂ ಸೋಂಕು ದೃಢ ಪ್ರಮಾಣ ಹೆಚ್ಚಿರುವ ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.ಬಿಎಸ್ವೈ ಅಧ್ಯಕ್ಷತೆಯಲ್ಲಿ ಇಂದು ಸಭೆ: ಸಿಎಂ ಬಿಎಸ್ವೈ ಅಧ್ಯಕ್ಷತೆಯಲ್ಲಿ ಸಚಿವರು, ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ಮಂಗಳವಾರ ನಡೆಯಲಿದ್ದು, ತಜ್ಞರು ಸಲ್ಲಿಸಿದ ವರದಿ ಚರ್ಚೆಯೇ ಪ್ರಮುಖ ಕಾರ್ಯಸೂಚಿಯಾಗಿದೆ. ಕೇಂದ್ರ ಸರ್ಕಾರದ ಸೂಚನೆ, ತಜ್ಞರ ಸಲಹೆಗಳು, ಸಂಭಾವ್ಯ 3ನೇ ಅಲೆ ಮುಂದಿಟ್ಟುಕೊಂಡು ಮುಂದಿನ ನಡೆಯ ಬಗ್ಗೆ ವಿಚಾರ ವಿನಿಮಯ ನಡೆಸಲಿದೆ. ಮತ್ತೊಮ್ಮೆ ಸಾರ್ವತ್ರಿಕ ಲಾಕ್ಡೌನ್ 10-15 ದಿನಗಳದ್ದಾದರೆ ಜನರು ಹೌಹಾರುವ ಸಾಧ್ಯತೆಗಳಿದ್ದು, ಲಾಕ್ಡೌನ್ ಇಲ್ಲವೇ ವೈಜ್ಞಾನಿಕ ಲಾಕ್ಡೌನ್ ಅಥವಾ ಅನ್ಲಾಕ್ ಯಾವುದೇ ಇದ್ದರೂ ಹಂತ ಹಂತವಾಗಿ ಜಾರಿಗೊಳಿಸಲು ಯೋಚಿಸಿದೆ.
ಪರಿಸ್ಥಿತಿ ಅವಲೋಕಿಸಿ ಲಾಕ್ಡೌನ್ ವಿಸ್ತರಿಸಬೇಕೆ ಎಂಬ ಕುರಿತು ಸಚಿವರು ಹಾಗೂ ತಜ್ಞರೊಂದಿಗೆ ರ್ಚಚಿಸಿ ತೀರ್ವನಿಸಲಾಗುವುದು. ಹೊಸ ಪ್ರಕರಣಗಳ ರೀತಿಯಲ್ಲೇ ಪಾಸಿಟಿವಿಟಿ ದರ, ಮರಣ ಪ್ರಮಾಣ ವಾರದೊಳಗೆ ಇಳಿಯುವ ನಿರೀಕ್ಷೆಯಿದೆ. | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಜನರ ಭಾವನೆಗೆ ಸ್ಪಂದಿಸಲು ಅನ್ಲಾಕ್ ಬಗ್ಗೆ ಕೆಲವು ಜನಪ್ರತಿನಿಧಿಗಳು ಹೇಳಿಕೆ ನೀಡಿರ ಬಹುದು. ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದು, ಸಿಎಂ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಲಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಲಾಕ್ಡೌನ್ ಬಗ್ಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಿ. | ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸೋಂಕು ಹಾಗೂ ಸಾವಿನ ಪ್ರಮಾಣದ ಜತೆಗೆ ಜನರ ಜೀವ, ಜೀವನ ಹಾಗೂ ಜೀವನೋಪಾಯ ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಸಭೆಯಲ್ಲಿ ರ್ಚಚಿಸಿ ವರದಿ ಸಲ್ಲಿಸಲಾಗಿದೆ. ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲು ಈ ವರದಿ ಒಂದು ಮಾನದಂಡವಾಗಿದ್ದು, ಇವುಗಳ ಜತೆಗೆ ಇನ್ನೂ ಹಲವು ವಿಷಯಗಳನ್ನು ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. | ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷ, ರಾಜ್ಯ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ