

ಕೋಲಾರ: ಸಮಾಜದಲ್ಲಿನ ಅಂಧಕಾರ, ಮೌಢ್ಯತೆ ನಿಮೂರ್ಲನೆಗೆ ವಿಜ್ಞಾನ ಸಹಕಾರಿ ಎಂದು ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಹೇಳಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಭೋದಿಸಿ ಮಾತನಾಡಿ, ಮನುಷ್ಯನ ಜೀವನದಲ್ಲಿ ವಿಜ್ಞಾನ ಅಗತ್ಯವಶ್ಯಕವಾಗಿದ್ದು, ಅದೇ ರೀತಿ ದೇಶದ ಸಮಗ್ರ ಅಭಿವೃದ್ದಿಯು ಸಹ ವಿಜ್ಞಾನದಿಂದ ಕಾಣಲು ಸಾಧ್ಯ ಎಂದು ತಿಳಿಸಿದರು.
ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು, ವಿಜ್ಞಾನ ತಂತ್ರಜ್ಞಾನ ಯೋಜನೆಗಳನ್ನು ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ಅನ್ವಯ ಮಾಡಿಕೊಳ್ಳುವುದು, ವಿದ್ಯಾರ್ಥಿಗಳು ಓದುವ ಹವ್ಯಾಸ ಬಳಸಿಕೊಂಡರೆ ಮಾತ್ರ ಅದು ಸಾಧ್ಯ ಎಂದರು.
ಮಕ್ಕಳು ಮೂಢ ನಂಬಿಕೆಗಳಿಂದ ದೂರವಾಗಬೇಕು, ಇದರ ಜತೆಗೆ ಪೋಷಕರಿಗೂ ಅರಿವು ಮೂಡಿಸಬೇಕು. ಯಾವುದೇ ವಿಷಯ, ನಿರ್ಧಾರದ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದುಕೊಂಡೇ ಒಪ್ಪುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಗಣಿತ ಶಿಕ್ಷಕಿ ಭವಾನಿ ಮಾತನಾಡಿ, ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೇ ಅನೇಕರು ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಯತ್ತ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದು ಎಚ್ಚರಿಸಿದರು.
ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಏಷ್ಯಾದಲ್ಲಿ ಮೊದಲಬಾರಿಗೆ ನೋಬೆಲ್ ಪ್ರಶಸ್ತಿ ಪಡೆದ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆ ನೆನಪಿನಲ್ಲಿ ವಿಜ್ಞಾನ ದಿನ ಆಚರಿಸಲಾಗುತ್ತದೆ. ಅವರು ದೇಶಕಂಡ ಆದರ್ಶ ವ್ಯಕ್ತಿತ್ವ ಹೊಂದಿದ್ದು ಅವರ ಜೀವನ ಆದರ್ಶಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದರು.
ಇತ್ತಿಚಿನ ದಿನಗಳಲ್ಲಿ ಆನ್ಲೈನ್ ಕಲಿಕೆ ಸೇರಿದಂತೆ ಕಲಿಕೆ ಮತ್ತಷ್ಟು ವೇಗದಿಂದ ಸಾಗುತ್ತಿದೆ. ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಜಗತ್ತಿಗೆ ಹೊಂದಿಕೊಂಡು ಆಧುನಿಕ ವ್ಯವಸ್ಥೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ, ಇದಕ್ಕೆಲ್ಲಾ ವಿಜ್ಞಾನವೇ ಆಸರೆಯಾಗಿದೆ, ನಮ್ಮದೇಶ ವಿಶ್ವಮಾನ್ಯವಾಗಲು ವಿಜ್ಞಾನವೂ ಕೊಡುಗೆ ನೀಡಿದೆ ಎಂದರು.
ಶಿಕ್ಷಕಿ ಸುಗುಣಾ ಮಾತನಾಡಿ, ವಿಜ್ಞಾನದಿಂದ ಮಾತ್ರ ನಾವು ಪ್ರಗತಿ ಸಾಧಿಸಲು ಸಾಧ್ಯ. ಇಸ್ರೋ ಮೂಲಕ ನಾವು ಚಂದ್ರ ಗ್ರಹವನ್ನು ತಲುಪಿದ್ದೇವೆ. ಇಂತಹ ವೈಜ್ಞಾನಿಕ ಸಾಧನೆಗಳಲ್ಲಿ ಇಡೀ ಪ್ರಪಂಚಕ್ಕೆ ಸಮುದ್ರ ಹಾಗೂ ಆಕಾಶ ಏಕೆ ನೀಲಿಯಾಗಿದೆ ಎಂದು ತಿಳಿಸಿದ ಮಹಾನ್ ಸಾಧಕರು ಸರ್.ಸಿ.ವಿ.ರಾಮನ್ ನಮ್ಮ ದೇಶದವರು ಎಂಬುದಕ್ಕೆ ಸಂತಸವಾಗುತ್ತಿದೆ ಎಂದರು.
ಶಿಕ್ಷಕಿ ಕೆ.ಲೀಲಾ ಮಕ್ಕಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ವೆಂಕಟರೆಡ್ಡಿ, ಶ್ವೇತಾ, ಫರೀದಾ, ರಮಾದೇವಿ, ಶ್ರೀನಿವಾಸಲು, ಚಂದ್ರಶೇಖರ್ ಮತಿತರರಿದ್ದರು.