ಸಹ್ಯಾದ್ರಿ ಕಾಲೇಜು ಹಿಂಭಾಗ ವಿಜ್ಞಾನ ಕೇಂದ್ರ ಬೇಡ: ಡಾ. ರಾಜೇಂದ್ರ ಚೆನ್ನಿ

dr. rajendra Channi
ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ
Published on

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಹಿಂಭಾಗದ ಏಳು ಎಕರೆ ಜಾಗದಲ್ಲಿ ರಾಜ್ಯ ಸರ್ಕಾರವು ವಿಜ್ಞಾನ ಕೇಂದ್ರ ಕೆಟಗರಿ-2 ಸ್ಥಾಪನೆ ನಿರ್ಧಾರವನ್ನು ತಕ್ಷಣ ಬದಲಿಸಬೇಕು. ಇಲ್ಲವಾದಲ್ಲಿ ಸಂಘರ್ಷಕ್ಕೂ ಸಿದ್ಧ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಎಚ್ಚರಿಸಿದರು.

ಹಿಂದೊಮ್ಮೆ ಇದೇ ಜಾಗದಲ್ಲಿ ಖೇಲೋ ಇಂಡಿಯಾ ಸ್ಥಾಪನೆಗೆ ಚಿಂತನೆ ನಡೆಸಲಾಗಿತ್ತು. ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಕೈಬಿಡಲಾಯಿತು. ಇದೀಗ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ಮಾಡಿಕೊಡದೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಿದ್ಧತೆಗಳು ನಡೆದಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಹ್ಯಾದ್ರಿ ಕಾಲೇಜು ಹಾಸ್ಟೆಲ್ ಹಿಂಭಾಗದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಕಟ್ಟಡದ ಪಕ್ಕದ ಖಾಲಿ ಜಾಗವನ್ನು ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿಯ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ 30 ವರ್ಷ ಗುತ್ತಿಗೆ ನೀಡಲು 2022ರ ಫೆ.28ರಂದು ಕುವೆಂಪು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈಗ ಅನುಮತಿ ನೀಡಿ ಆದೇಶಿಸಲಾಗಿದೆ. ವಿಜ್ಞಾನ ಕೇಂದ್ರ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಆದರೆ ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ಆಕ್ಷೇಪಣೆ ಇದೆ ಎಂದರು.
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ ಮಾತನಾಡಿ, ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಹ್ಯಾದ್ರಿ ಕಾಲೇಜು ಜಮೀನು ಮಂಜೂರು ಮಾಡುವ ಬಗ್ಗೆ ಕುವೆಂಪು ವಿವಿಯಲ್ಲಿ 2022ರಲ್ಲಿ ಸಿಂಡಿಕೇಟ್ ಸಭೆ ನಡೆಸಿ ಗುತ್ತಿಗೆ ನೀಡಲಾಗಿದೆ. ಈ ನಿರ್ಧಾರ ಕೈಬಿಡುವ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ, ಸಂಚಾಲಕರಾದ ಚಂದ್ರಪ್ಪ ಜೋಗಿ, ಆರ್.ಯೋಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ಕೇಂದ್ರ ಸ್ಥಾಪನೆಗೆ ಆಯನೂರಲ್ಲಿ ಜಾಗ
ಆಯನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕವೇ 250 ಎಕರೆ ಸರ್ಕಾರಿ ಜಾಗವಿದೆ. ಪ್ರಥಮದರ್ಜೆ ಕಾಲೇಜು, ದ್ವಿತೀಯ ಪಿಯು ಕಾಲೇಜು, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯವೂ ಅಲ್ಲಿದೆ. ಹಾಗಾಗಿ ವಿಜ್ಞಾನ ಕೇಂದ್ರವನ್ನು ಆಯನೂರಿನಲ್ಲಿ ಸ್ಥಾಪನೆ ಮಾಡುವುದು ಹೆಚ್ಚು ಸೂಕ್ತ ಎಂದು ಮಾಜಿ ಎಂಎಲ್‌ಸಿ, ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿ ಆಯನೂರು ಮಂಜುನಾಥ ತಿಳಿಸಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಮ್ಮದೇ ಶಿಕ್ಷಣ ಸಂಸ್ಥೆ ಪೆಸಿಟ್ ಆವರಣದಲ್ಲಿ ಜಾಗ ಕೊಟ್ಟರೂ ಅಭ್ಯಂತರವಿಲ್ಲ. ಆದರೆ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಥಾಪನೆಗೆ ಮುಂದಾದರೆ ಸಹಿಸುವುದಿಲ್ಲ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಬಿ.ವೈ.ರಾಘವೇಂದ್ರ ಅವರು ಹಠ ಬಿಟ್ಟು ತಾವೇ ಮುಂದೆ ನಿಂತು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net