ವಿಜ್ಞಾನ ಕೇಂದ್ರ, ತಾರಾಲಯ ನಿರ್ಮಾಣ ಶೀಘ್ರ

science center
Published on

ಮಡಿಕೇರಿ:

ಕೊಡಗಿನ ವಿಜ್ಞಾನಾಸಕ್ತರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸುಮಾರು 12.5 ಕೋಟಿ ರೂ. ವೆಚ್ಚದ ಈ ಯೋಜನೆ ಎಲ್ಲವೂ ಅಂದುಕೊAಡAತೆ ಆದರೆ 2027ಕ್ಕೆ ಪೂರ್ಣಗೊಳ್ಳಲಿದೆ. 2022ರಿಂದಲೇ ಈ ಸಂಬAಧ ಪ್ರಯತ್ನಗಳು ನಡೆಯುತ್ತಿದ್ದರೂ ಪ್ರಕೃತಿ ವಿಕೋಪ ಮತ್ತು ಭೂಕುಸಿತದ ಕಾರಣದಿಂದ ವಿಳಂಬ ಆಗುತ್ತಲೇ ಬರುತ್ತಿತ್ತು.

ಜನಸಾಮಾನ್ಯರಲ್ಲೂ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಬೇಕು, ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಗತಿಗಳ ಕಡೆಗೆ ಸೆಳೆಯಬೇಕು ಎನ್ನುವ ಕಾರಣಕ್ಕೆ ಕೊಡಗಿಗೂ ಒಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬೇಕು ಎನ್ನುವ ಬೇಡಿಕೆ ಸ್ಥಳೀಯ ವಿಜ್ಞಾನಾಸಕ್ತರಿಂದ ಬಹಳ ಹಿಂದಿನಿAದಲೂ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಮಡಿಕೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣದ ಘೋಷಣೆ ಮಾಡಿತ್ತು. ಈ ಬೆನ್ನಲ್ಲೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮಾದರಿಯಲ್ಲೇ ಕೊಡಗಿನಲ್ಲೂ ನೂತನ ತಂತ್ರಜ್ಞಾನ ಮತ್ತು ತಾಂತ್ರಿಕ ವಿನ್ಯಾಸದೊಂದಿಗೆ ವಿಜ್ಞಾನ ಕೇಂದ್ರ ನಿರ್ಮಿಸುವ ಯೋಜನೆಯೂ ಸಿದ್ಧವಾಗಿತ್ತು.

ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಸರ್ಕಾರದ ವಿವಿಧ ಸಂಶೋಧನಾ ಸಂಸ್ಥೆಗಳು, ವಿವಿಧ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ಜಿಲ್ಲೆಯಲ್ಲಿ ವೈಜ್ಞಾನಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರ ಪ್ರಯತ್ನದ ಫಲವಾಗಿ ಜಿಲ್ಲಾಡಳಿತದಿಂದ ಈ ಉದ್ದೇಶಕ್ಕಾಗಿ ಮಕ್ಕಂದೂರು ಗ್ರಾಮದ ಸ.ನಂ. 249/5ಪಿ1ರಲ್ಲಿ 3.80 ಎಕರೆ ಮತ್ತು ಸ.ನಂ. 249/6ಪಿ1ರ 3.30 ಎಕರೆ ಸರ್ಕಾರಿ ಜಾಗ ಕಾಯ್ದಿರಿಸಲಾಗಿದ್ದು, ಇಲ್ಲಿ ನಡೆಯಲಿದರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಜನವರಿಯಲ್ಲಿ ಭೂಮಿಪೂಜೆ ಮಾಡಿದ್ದರು.

ಇದೀಗ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣ ಕಾರ್ಯಕ್ಕೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರ್ಕಾರದ ಹಂತದಲ್ಲಿ ಒಪ್ಪಿಗೆ ಸಿಗಲು ಬಾಕಿ ಇದೆ. ಮಳೆ ಕಾರಣ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಲಿದೆ. 2017ಕ್ಕೆ ಕಾಮಗಾರಿ ಮುಗಿದು ಮಹತ್ವದ ಈ ಕೇಂದ್ರಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಜಿಲ್ಲೆಯ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ವಿಜ್ಞಾನದ ಅವಿಷ್ಕಾರಗಳು ಮತ್ತು ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸ್ಥಾಪಿಸಲಾಗುತ್ತಿದೆ. ಅತ್ಯಾಧುನಿಕ ಮಾದರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ 7.25 ಕೋಟಿ ರೂ. ಹಾಗೂ ತಾರಾಲಯ (ಪ್ಲಾನಿಟೋರಿಯಂ) ನಿರ್ಮಾಣಕ್ಕೆ 5.24 ಕೋಟಿ ರೂ.ಗಳನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವೆಚ್ಚ ಮಾಡಲಿದೆ.

ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಕೇಂದ್ರ, 8 ಮೀ ವ್ಯಾಸದ ಗುಮ್ಮಟ ಹೊಂದಿರುವ ತಾರಾಲಯ ಇರಲಿದೆ. ವಿಜ್ಞಾನ ಕೇಂದ್ರದ ಒಳಗಡೆ ವಿಜ್ಞಾನಕ್ಕೆ ಸಂಬAಧಿಸಿದ ವಿವಿಧ ಸಲಕರಣೆ, ಸಾಧನಗಳು, ಪ್ರಯೋಗಾಲಯ, ವಿಜ್ಞಾನಿಗಳ ಪ್ರತಿಮೆಗಳು, ವಿವಿಧ ಪ್ರಯೋಗದ ವಸ್ತುಗಳು ಇರಲಿದೆ. ಈ ಮೊದಲು ಈ ಕೇಂದ್ರವನ್ನು ಮಡಿಕೇರಿ ನಗರದ ಸ್ಟೀವರ್ಟ್ ಹಿಲ್‌ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ಇಲ್ಲಿ ಭೂಕುಸಿತದ ಕಾರಣದಿಂದ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ.

ವಿಜ್ಞಾನವನ್ನು ಜನ ಸಾಮಾನ್ಯರ ಕಡೆಗೆ ಕರೆದೊಯ್ದು, ಜನರನ್ನು ವಿಜ್ಞಾನದ ಕಡೆಗೆ ಸೆಳೆಯುವ ದೂರದÊಷ್ಠಿ ಇಟ್ಟುಕೊಂಡು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕೆಲಸ ಮಾಡುತ್ತವೆ. ಇವು ಸಣ್ಣ ಪ್ರಮಾಣದ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಾಗಿದ್ದು, ರಾಜ್ಯಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರಚುರಪಡಿಸಲು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದೊಂದಿಗೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಸ್ಥಾಪಿಸಲಾಗುತ್ತಿದೆ ಎನ್ನುತ್ತದೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್). ಇದೇ ಆಶಯದೊಂದಿಗೆ ಜಿಲ್ಲೆಯಲ್ಲೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಆರಂಭವಾಗಲಿದೆ.

ವೈಜ್ಞಾನಿಕ ಶಿಕ್ಷಣ ಉತ್ತೇಜಿಸುವುದು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹುಟ್ಟುಹಾಕುವುದು, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ವೈಜ್ಞಾನಿಕ ವಿಚಾರಣೆಯ ಸಂಸ್ಕೃತಿಯನ್ನು ಬೆಳೆಸುವುದು, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಅರಿವು ಮತ್ತು ಆಸಕ್ತಿ ಹೆಚ್ಚಿಸುವುದು, ಜಿಲ್ಲೆಯೊಳಗೆ ಶೈಕ್ಷಣಿಕ ಮತ್ತು ಸಂಶೋಧನಾ ಅವಕಾಶಗಳನ್ನು ಒದಗಿಸುವುದು, ಕೊಡಗು ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರವಾಸೋದ್ಯಮ ಉತ್ತೇಜಿಸುವುದು, ವೈಜ್ಞಾನಿಕ ಚಟುವಟಿಕೆಗಳಿಗೆ ಕೇಂದ್ರವಾಗುವುದು, ನಿಯಮಿತವಾಗಿ ಪ್ರದರ್ಶನಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಬAಧಿತ ರಸಪ್ರಶ್ನೆ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಿಗೆ ವಿಜ್ಞಾನ ಸಮ್ಮೇಳನಗಳನ್ನು ನಡೆಸುವುದು ಮತ್ತಿತರ ಗುರಿಗಳು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸ್ಥಾಪನೆಯ ಹಿಂದಿದೆ.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಆರಂಭವಾಗುವುದರಿAದ ಜಿಲ್ಲೆಯ ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಪ್ರಯೋಜನ ಆಗಲಿದೆ. ಮೂಲ ವಿಜ್ಞಾನದ ಕಡೆಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವಲ್ಲೂ ದೊಡ್ಡ ಕೊಡುಗೆ ನೀಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರ ಕಾಳಜಿಯೂ ಕೇಂದ್ರದ ಹಿಂದಿದೆ.

- ಟಿ.ಜಿ. ಪ್ರೇಮಕುಮಾರ, ವಿಜ್ಞಾನ ಕಾರ್ಯಕ್ರಮಗಳ ಸಂಘಟಕ, ಕೊಡಗು

ಮಡಿಕೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆ ಅಂತಿಮವಾಗಿದ್ದು, ಸರ್ಕಾರಕ್ಕೆ ಕಳುಹಿಸಲಾಗಿದೆ. ಮಳೆಯ ಕಾರಣ ಕಾಮಗಾರಿ ವಿಳಂಬ ಆಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಕಾಮಗಾರಿ ಆರಂಭ ಆಗಲಿದೆ.

ಕೆ. ಇಬ್ರಾಹಿಂ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net