

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ತೀವ್ರ ಪೈಪೋಟಿ ನಡುವೆ ಮೂಲಸೌಕರ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಸೊರಗುತ್ತಿವೆ.
ಪ್ರತಿ ವರ್ಷ ಸರ್ಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಬಹುತೇಕ ಶಾಲಾ ಕಟ್ಟಡಗಳು ಇಂದಿಗೂ ದುಸ್ಥಿತಿಯಲ್ಲಿವೆ. ಕಿತ್ತು ಬಂದಿರುವ ಛಾವಣಿ, ಸೀಳಿರುವ ಗೋಡೆ, ಮಳೆ ಬಂದಾಗ ಸೋರುವ ನೀರು, ಮೈದಾನ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಜಾಗದ ಕೊರತೆ, ಶಾಲೆಯ ಆವರಣ ಒತ್ತುವರಿ, ಶಿಕ್ಷಕರ ಹುದ್ದೆ ಖಾಲಿ ಸೇರಿದಂತೆ ಹಲವು ಸಮಸ್ಯೆಗಳು ಇಂದಿಗೂ ಸರ್ಕಾರಿ ಶಾಲೆಗಳನ್ನು ಬಾಧಿಸುತ್ತಿವೆ.
ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ 690 ಕಟ್ಟಡಗಳು ದುರಸ್ತಿಗೆ ಕಾದಿವೆ. ಇದಕ್ಕಾಗಿ 10.17 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಕ್ರಿಯಾಯೋಜನೆ ಸಲ್ಲಿಸಿದೆ.
ಪಾಲಕರಲ್ಲಿನ ಆಂಗ್ಲ ಮಾಧ್ಯಮ ವ್ಯಾಮೋಹ, ಸರ್ಕಾರಿ ಶಾಲೆಗಳ ಮೇಲಿನ ಅಸಡ್ಡೆಯಿಂದ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗುತ್ತಿವೆ. ಇದಕ್ಕೆ ಅನುಗುಣವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆಕರ್ಷಕ ಸವಲತ್ತು ಮತ್ತು ಗುಣಮಟ್ಟದ ಶಿಕ್ಷಣದ ನೆಪದಲ್ಲಿ ಪಾಲಕರು ಮತ್ತು ಮಕ್ಕಳ ಒಲವು ಗಳಿಸಿ, ಸೆಳೆದುಕೊಳ್ಳುತ್ತಿವೆ.
ಪ್ರಸಕ್ತ ಸಾಲಿನಲ್ಲಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಪ್ರಾರಂಭವಾಗಿಲ್ಲ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ನಡುವೆ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಅನೇಕರು ಮಕ್ಕಳನ್ನು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿದ್ದಾರೆ. ಆದರೆ, ಇದೇ ವೇಳೆ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಆಕರ್ಷಕ ವಾತಾವರಣ ನಿರ್ಮಿಸಲು ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕರೊನಾ ವೇಳೆ ಅಭಿವೃದ್ಧಿ ನಿರೀಕ್ಷೆ : ಜಿಲ್ಲೆಯಲ್ಲಿ 1,477 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 111 ಪ್ರೌಢಶಾಲೆಗಳಿವೆ. ಈ ಪೈಕಿ 327 ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 557 ಕ್ಕೂ ಹೆಚ್ಚು ಕೊಠಡಿಗಳು ದುರಸ್ತಿಗೊಂಡಿಲ್ಲ. ಪ್ರಸ್ತುತ ಇವು ಮಕ್ಕಳು ಕೂತು ಪಾಠ ಕೇಳಲು ಯೋಗ್ಯವಾಗಿಲ್ಲ. 45 ಪ್ರೌಢಶಾಲೆಗಳಲ್ಲಿ 133 ಕೊಠಡಿಗಳು ದುರಸ್ತಿಗೆ ಎದುರು ನೋಡುತ್ತಿವೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದೇ ವೇಳೆ ಅನುದಾನ ಬಳಸಿಕೊಂಡು ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಬಹುದು. ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ಇದರಿಂದ ಬಡ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ.
ಸವಲತ್ತಿನ ನಡುವೆ ನೀರಸ : ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ, ಸಮವಸ್ತ್ರ ಮತ್ತು ಪುಸ್ತಕ, ಶೂ, ಕಲಿಕೋಪಕರಣ, ಉಚಿತ ಬಸ್ ಪಾಸ್, ಮಧ್ಯಾಹ್ನ ಬಿಸಿಯೂಟ ಸೇರಿ ಹಲವು ಸವಲತ್ತು ಒದಗಿಸಲಾಗುತ್ತಿದೆ. ಆದರೂ ಶಾಲೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ನಿರ್ಲಕ್ಷ್ಯ ಕಂಡು ಬರುತ್ತಿದೆ. ಲೋಪ ಸರಿಪಡಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಮಕ್ಕಳ ದಾಖಲು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಕೆಯ ಜಪಕ್ಕೆ ಸೀಮಿತವಾಗಿದ್ದಾರೆ. ಸಮರ್ಪಕ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತಿಲ್ಲ.
ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಶಾಲೆಗಳಲ್ಲಿ ದುರಸ್ತಿ ಕೈಗೊಳ್ಳಬೇಕಾಗಿದೆ. ಇದಕ್ಕೆ 10 ಕೋಟಿ ರೂ. ಅನುದಾನದ ಅಗತ್ಯವಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಬಿಡುಗಡೆಯಾಗುವ ಹಣದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು. ಜಯರಾಮರೆಡ್ಡಿ, ಡಿಡಿಪಿಐ, ಚಿಕ್ಕಬಳ್ಳಾಪುರ ದುರಸ್ತಿಯಾಗದ ಶಾಲಾ ಕೊಠಡಿಗಳಲ್ಲಿ ಪಾಠ ಕೇಳಲು ಕಷ್ಟವಾಗುತ್ತದೆ. ಈಗಲಾದರೂ ಸಂಬಂಧಪಟ್ಟವರು ಶಾಲೆಗಳ ದುಸ್ಥಿತಿ ಸರಿಪಡಿಸಬೇಕು. ಶಿವಕುಮಾರ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ