

ಚಾಮರಾಜನಗರ: ಎಂದಿನಂತೆ ಇಂದು ಕೂಡ ಶಾಲೆಗೆ ತೆರಳಿದ್ದ 3ನೇ ತರಗತಿ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ಕುಸಿದುಬಿದ್ದು, ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ಸಂಭವಿಸಿದೆ.
ನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ, ತಾಲೂಕಿನ ಬದನಗುಪ್ಪೆ ಗ್ರಾಮದ ನಿಂಗರಾಜು ಮತ್ತು ಶೃತಿ ದಂಪತಿ ಪುತ್ರಿ ತೇಜಸ್ವಿನಿ ಮೃತ ಬಾಲಕಿ. ಇಂದು ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ದಿಢೀರ್ ಶಿಕ್ಷಕಿಯ ಎದುರೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಶಾಲೆಯ ಸಿಬ್ಬಂದಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಕಂಗಾಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದು ದಿನವೂ ಅನಾರೋಗ್ಯ ಸಮಸ್ಯೆ ಕಾಡಿರಲಿಲ್ಲ. ಇದ್ದಕ್ಕಿದ್ದಂತೆಯೇ ಮಗಳಿಗೆ ಹೃದಯಾಘಾತವಾಗಿದೆ ಎನ್ನುವುದು ಪಾಲಕರನ್ನು ದಿಗ್ಭ್ರಮಗೊಳಿಸಿದೆ. ಶವ ಪರೀಕ್ಷೆ ಮಾಡಿಸಲು ಒಪ್ಪದ ಪೋಷಕರು ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.