ಹೆಣ್ಣುಮಕ್ಕಳ ಸಬಲೀಕರಣಕ್ಕೆ ಯೋಜನೆ

IMG-20240311-WA0014
Published on

ತಿ.ನರಸೀಪುರ: ರಾಜ್ಯದ ಎಸ್‌ಸಿ/ಎಸ್‌ಟಿ ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನಾಟಿ ಕೋಳಿಗಳ ವಿತರಣೆಗೆ ಮುಂದಿನ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು.


ಪಶುಪಾಲನಾ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಲ ಸಹಯೋಗದೊಂದಿಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಗ್ರಾಮೀಣ ಮಹಿಳೆಯರಿಗೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನಾಟಿ ಕೋಳಿಮರಿ ವಿತರಿಸಿ ಮಾತನಾಡಿದರು.
ನಾಟಿ ಕೋಳಿ ವಿತರಿಸುವ ಇಲಾಖೆಯ ಕಾರ್ಯಕ್ರಮ ಉತ್ತಮವಾಗಿದೆ. ಪ್ರತಿ ಫಲಾನುಭವಿಗೆ 10 ಕೋಳಿ ಮರಿ ವಿತರಿಸುವ ಕಾರ್ಯಕ್ರಮ ಇದಾಗಿದ್ದು, ಕ್ಷೇತ್ರದಲ್ಲಿ 10 ಸಾವಿರ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದರು.
ಈಗ 10 ಸಾವಿರ ಕೋಳಿ ಮರಿಗಳನ್ನು ಕೆಲ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಆದರೆ ಕ್ಷೇತ್ರದ ಪ್ರತಿ ಮನೆಯ ಪ್ರತಿ ಮಹಿಳೆಗೂ ನಾಟಿ ಕೋಳಿ ಮರಿ ವಿತರಿಸಬೇಕೆಂಬ ಆಶಯ ನಮ್ಮದಾಗಿದೆ. ಹಾಗಾಗಿ ಅಧಿಕಾರಿಗಳು ಮುಂದೆ ಕ್ಷೇತ್ರದ ಎಲ್ಲ ಮಹಿಳೆಯರಿಗೆ ಯೋಜನೆ ತಲುಪಿಸಲು ಮುಂದಾಗಬೇಕು. ಇದಕ್ಕೆ ಎಷ್ಟೇ ಅನುದಾನ ಬೇಕಾದರೂ ನೀಡಲಾಗುವುದು. ಅಧಿಕಾರಿಗಳು 50ರಿಂದ 60 ಕೋಟಿ ರೂ.ಗಳಾದರೆ ಇಡೀ ರಾಜ್ಯಕ್ಕೆ ನಾಟಿ ಕೋಳಿ ಮರಿ ಕೊಡಬಹುದು ಎಂದು ನನಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಮುಂಬರುವ ಬಜೆಟ್‌ನಲ್ಲಿ ಯೋಜನೆ ರೂಪಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.


500 ಕೋಟಿ ರೂ. ಅನುದಾನ: ಸಮಾಜ ಕಲ್ಯಾಣ ಸಚಿವನಾಗಿ ಅಧಿಕಾರ ವಹಿಸಿಕೊಂಡು ವರ್ಷ ಕೂಡ ಆಗಿಲ್ಲ. ಆದರೂ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ 500 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿದ್ದೇನೆ. ಮೂಗೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 100 ಕೋಟಿ ರೂ., ದೊಡ್ಡೇಬಾಗಿಲು ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗೆ 34 ಕೋಟಿ ರೂ., ತುರುಗನೂರು ನೀರಾವರಿ ಯೋಜನೆಗೆ 100 ಕೋಟಿ ರೂ., ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 100 ಕೋಟಿ ರೂ. ಹಾಗೂ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿಗೆ 75ರಿಂದ 100 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ವಿವರಿಸಿದರು.


ಯೋಜನೆ ಇಲ್ಲದೆ ದೇಗುಲ ಕೆಡವಿದರು: ಕ್ಷೇತ್ರದಲ್ಲಿ ಏನು ಮಾಡದವರು ಏನೇನೋ ಮಾತನಾಡುತ್ತಾರೆ. ಆದರೆ ಎಲ್ಲವನ್ನೂ ಮಾಡಿ ನಾವೇನು ಮಾತನಾಡುತ್ತಿಲ್ಲ. ಮುಡುಕುತೊರೆ ದೇವಸ್ಥಾನವನ್ನು ಮುಂದಾಲೋಚನೆ ಇಲ್ಲದೆ ಕೆಡವಿದರು. ದುಡ್ಡಿದೆಯೋ ಇಲ್ಲವೋ ಎಂಬ ಅರಿವಿಲ್ಲದೆ ಕೆಡವಿ ಈಗ ಕಟ್ಟಲು ಪರದಾಡುತ್ತಿದ್ದಾರೆ ಎಂದು ದೇವಸ್ಥಾನ ಕೆಡವಿದ್ದ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದರಲ್ಲದೆ, ಕೆಡುವ ಕೆಲಸ ಮಾಡಿದರೆ ನಾನು ಕಟ್ಟುವ ಕೆಲಸ ಮಾಡುತ್ತೇನೆ. ಈಗ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ.ಗಳನ್ನು ಕೊಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಕೆಡಿಪಿ ಸದಸ್ಯ ಸುನೀಲ್ ಬೋಸ್, ಕುಕ್ಕುಟ ಮಹಾ ಮಂಡಲದ ಅಧ್ಯಕ್ಷ ಚಂದ್ರಶೇಖರ್, ತಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಮಲ್ಲಿಕಾರ್ಜುನಸ್ವಾಮಿ, ಉಮೇಶ್, ಪುರಸಭೆ ಮಾಜಿ ಅಧ್ಯಕ್ಷ ಎಸ್.ಮದನ್‌ರಾಜ್, ನರಸಿಂಹ ಮಾದನಾಯಕ, ಗಣೇಶ್, ಆಪ್ತ ಸಹಾಯಕ ಲಕ್ಷ್ಮೀನಾರಾಯಣ, ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಂ.ಮಧು ಕುಮಾರ್, ತಹಸೀಲ್ದಾರ್ ಸುರೇಶ್ ಆಚಾರ್, ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ನಾಗರಾಜು, ಮುಖ್ಯ ಪಶು ವೈದ್ಯಾಧಿಕಾರಿ(ಆಡಳಿತ)ಡಾ.ಲಿಂಗರಾಜು, ಜಾನುವಾರು ಅಭಿವೃದ್ಧಿ ಅಧಿಕಾರಿ ಡಿ.ಶಿವಣ್ಣ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಿ.ಪ್ರಕಾಶ್, ಶಿವಮಲ್ಲಪ್ಪ, ಕುಕ್ಕಟ ಮಹಾಮಂಡಲದ ನಿರ್ದೇಶಕ ಡಾ.ನಂಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಜಗದೀಶ್, ವೀಣಾ ಶಿವಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net