ತಹಸೀಲ್ದಾರ್‌ಗಳಿಗೆ ಶಾಸಕ ತರಾಟೆ

11 HDK 01
Published on


ಎಚ್.ಡಿ.ಕೋಟೆ: ಶಾಸಕನಾದ ನನಗೆ ನೀವು ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದರೆ ಸಾರ್ವಜನಿಕರಿಗೆ ನೀವು ಯಾವ ರೀತಿ ಸುಳ್ಳು ಹೇಳಿರಬಹುದು ಎಂದು ತಹಸೀಲ್ದಾರ್‌ಗಳಾದ ಸಣ್ಣರಾಮಪ್ಪ ಹಾಗೂ ಪರಶಿವಮೂರ್ತಿ ಅವರನ್ನು ಶಾಸಕ ಅನಿಲ್ ಚಿಕ್ಕಮಾದು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗದ ಹಿತರಕ್ಷಣಾ ಸಭೆಯಲ್ಲಿ ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಪಾಸ್ ಆದ ಕಡತಗಳನ್ನು ಸಾಗುವಳಿ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ನನಗೆ ಕಳೆದ ಮಾರ್ಚ್‌ನಲ್ಲಿ ಹೇಳಿದ್ರಿ. ಆದರೆ ಸಭೆಯಲ್ಲಿ ಈಗ ಪತ್ರ ಬರೆಯುತ್ತೇನೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದೀರಾ? ಅಕ್ರಮ ಸಕ್ರಮ ಸಮಿತಿ ಸಭೆ ನಡೆದು ಆರು ತಿಂಗಳು ಕಳೆದರೂ ಇನ್ನೂ ನೀವು ಜಿಲ್ಲಾಧಿಕಾರಿಗೆ ವರದಿ ಕಳಿಸಿಲ್ಲ ಎಂದರೆ ನೀವು ಯಾಕೆ ಇಲ್ಲಿ ಕೆಲಸ ಮಾಡಬೇಕು? ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಎಆರ್‌ಐ ವರದಿ ಮೇಲೆ ನೀವು ತಯಾರಿಸಿದ ಕಡತಕ್ಕೆ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಸಹಿ ಮಾಡಿದ್ದೇನೆ. ಸಭೆಯಲ್ಲಿ ನಿರ್ಣಯ ಆದ ನಂತರ ನೀವು ಮತ್ತೆ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕು ಎಂದು ವರದಿ ಮಾಡಿರುವುದರಿಂದ ನನ್ನ ಹಕ್ಕಿಗೆ ಚ್ಯುತಿ ಉಂಟಾಗಿದೆ. ಹಾಗಾಗಿ ನಿಮ್ಮ ಮೇಲೆ ಹಕ್ಕುಚ್ಯುತಿ ಮಂಡಿಸುತ್ತೇನೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡುತ್ತೇನೆ ಎಂದು ಗುಡುಗಿದ ಶಾಸಕರು, ಕಡತ ಸರಿ ಇಲ್ಲ ಅಂದ ಮೇಲೆ ನೀವು ಯಾಕೆ ಸಭೆಗೆ ಇಡಬೇಕಿತ್ತು ಎಂದು ತಹಸೀಲ್ದಾರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಸಣ್ಣರಾಮಪ್ಪ ಮಾತನಾಡಿ, ಫಾರಂ 53 ಮತ್ತು 50 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಗೋಮಾಳದಲ್ಲಿ ಸಾಗುವಳಿ ಮಾಡಲು ಅವಕಾಶ ಇದೆ. ಹಾಗಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದರು.

ಮುಖಂಡರಾದ ಹೈರಿಗೆ ಮುದ್ದಮಲ್ಲಯ್ಯ ಮಾತನಾಡಿ, ತಾಲೂಕು ಕಚೇರಿಯಲ್ಲಿ ದಾಖಲೆಗಳು ನಾಪತ್ತೆಯಾಗಿವೆ ಎಂದು ಹಿಂಬರಹ ನೀಡುವುದಾದರೆ ತಹಸೀಲ್ದಾರ್ ಯಾವ ಕೆಲಸ ಮಾಡುತ್ತಿದ್ದಾರೆ? ಮೂರು ವರ್ಷಗಳ ಹಿಂದೆ ನಡೆದ ನಡಾವಳಿಗೆ ಸಮರ್ಪಕವಾಗಿ ಉತ್ತರ ಸಿಗಲಿಲ್ಲ ಎಂದರೆ ಯಾವ ಪುರುಷಾರ್ಥಕ್ಕೆ ಸಭೆ ಮಾಡಬೇಕು. ಆರ್‌ಟಿಸಿ ತಿದ್ದುಪಡಿ ಮಾಡಲು ಎಷ್ಟು ಕಾಲಾವಕಾಶ ಬೇಕು? ಮೂರು ವರ್ಷಗಳಿಂದ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲವೇ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ ಎಷ್ಟು ಪ್ರಾಮುಖ್ಯತೆ ಪಡೆದಿರುತ್ತದೋ ಅಷ್ಟೇ ಪ್ರಾಮುಖ್ಯತೆ ಎಸ್ಸಿ-ಎಸ್ಟಿ ಸಭೆಗೂ ಇರುತ್ತದೆ. ಅಧಿಕಾರಿಗಳು ಸಮನ್ವಯ ಮಾಡಿಕೊಂಡು ಮುಂಚಿತವಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಂಡು ಬರಬೇಕು. ದಸರಾ ಮುಗಿದ ನಂತರ ನವೆಂಬರ್ ಮೊದಲ ವಾರದಲ್ಲಿ ಸಭೆ ಕರೆಯಲಾಗುತ್ತದೆ. ಅಷ್ಟರೊಳಗೆ ಸಭೆಯಲ್ಲಿ ನಿರ್ಣಯ ಆದ ದೂರುಗಳಿಗೆ ಉತ್ತರ ಸಿಗಬೇಕು. ಅಧಿಕಾರಿಗಳು ಸಮರ್ಪಕವಾದ ಉತ್ತರದ ಜತೆ ಬರಬೇಕು. ಇಲ್ಲದಿದ್ದರೆ ಸಭೆ ನಡೆಸುವುದೇ ಬೇಡ ಎಂದು ಖಡಕ್ ಆಗಿ ಹೇಳಿದರು.

ಸಭೆಯಲ್ಲಿ ತಾಪಂ ಇಒಗಳಾದ ಧರಣೀಶ್, ಸುಷ್ಮಾ, ಅಧಿಕಾರಿಗಳಾದ ರಾಮಸ್ವಾಮಿ, ನಾರಾಯಣಸ್ವಾಮಿ, ಶಬ್ಬೀರ್ ಹುಸೇನ್, ಲಕ್ಷ್ಮೀಕಾಂತ್, ನಂದೀಶ್ ಕುಮಾರ್, ರವಿಶಂಕರ್, ಮುಖಂಡರಾದ ಬೆಟ್ಟಯ್ಯ ಕೋಟೆ, ಕೊತ್ತೇಗಾಲ ತಿಮ್ಮಯ್ಯ, ಶಂಭುಲಿಂಗನಾಯಕ, ನಾಗರಾಜು, ಸೋಗಹಳ್ಳಿ ಶಿವಣ್ಣ, ಸಣ್ಣಕುಮಾರ್, ಸರಗೂರು ಶಿವಣ್ಣ, ಮಲ್ಲೇಶ, ಪರಶಿವಮೂರ್ತಿ, ಮಹಾದೇವನಾಯಕ, ಗೋಪಾಲಸ್ವಾಮಿ, ಬಸವರಾಜು ಇದ್ದರು.

ಹಕ್ಕು ಪತ್ರ ನೀಡಿಲ್ಲ
2006ರಲ್ಲಿ ಡಿ.ಬಿ ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಹಾಡಿಗಳಿದ್ದು, ಇನ್ನೂ ಕೂಡ ಆದಿವಾಸಿ ಜನರಿಗೆ ಹಕ್ಕು ಪತ್ರ ನೀಡಲು ಅಧಿಕಾರಿಗಳು ಕ್ರಮವಹಿಸಿಲ್ಲ. ಅವರಿಗೆ ಒಂದು, ಎರಡು ಗುಂಟೆ ಜಮೀನು ಮಾತ್ರ ಮಂಜೂರು ಮಾಡಲಾಗಿದೆ ಎಂದು ಆದಿವಾಸಿ ಮುಖಂಡ ವಿಜಯಕುಮಾರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕರು, ಈಗಾಗಲೇ 230 ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಇನ್ನೂ 11 ಜನರಿಗೆ ಮಾತ್ರ ಬಾಕಿ ಇದ್ದು, ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುತ್ತದೆ ಎಂದರು.ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಿಸಿ ಮಾರಾಟ ಮಾಡಲು ಅರಣ್ಯ ಹಕ್ಕು ಕಾಯ್ದೆ ಅಡಿ ಅವಕಾಶ ಇದೆ. ಆದರೆ ಕೆಲವೇ ಪ್ರದೇಶಕ್ಕೆ ಅವಕಾಶ ನೀಡಿದ್ದು, 25 ಹಾಡಿಗಳಿಗೆ ಎ.ಬಿ.ಸಿ ಫಾರಂ ಗೆ ಹಕ್ಕು ನೀಡಿದರೆ ನಮಗೆ ಯಾವುದೇ ಅಡೆತಡೆ ಇಲ್ಲದೆ ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಿಸಲು ಅವಕಾಶ ಇದೆ. ಇದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಈ ವಿಚಾರದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಅರಣ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಜಮೀನಿಗೆ ನುಗ್ಗಿ ಹಲ್ಲೆ
ಸರಗೂರು ತಾಲೂಕಿನ ಶಾಂತಿಪುರ ಗ್ರಾಮದ ಮಹಾದೇವಮ್ಮ ಮಾತನಾಡಿ, ಇಟ್ನಾ ಗ್ರಾಮದ ಕೆಲವರು ಏಕಾಏಕಿ ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನನ್ನ ಹಾಗೂ ನನ್ನ ವಾರಗಿತ್ತಿಯನ್ನು ಎಳೆದಾಡಿ ಹಲ್ಲೆ ಮಾಡಿ ಜಮೀನಿನಿಂದ ಹೊರ ಹಾಕಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಅಳಲು ತೋಡಿಕೊಂಡರು. ಈ ಕೂಡಲೇ ದೂರು ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸರಗೂರು ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಅವರಿಗೆ ಶಾಸಕರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net