ಎಸ್ಸಿ, ಎಸ್ಟಿ ಹಣ ಗ್ಯಾರಂಟಿಗೆ ಬಳಕೆ

jds protest
ಕೋಲಾರದ ಬಸ್​ ನಿಲ್ದಾಣದ ವೃತ್ತದಲ್ಲಿ ಜೆಡಿಎಸ್​ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಪರಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿ, ನಗರದಲ್ಲಿ ಜೆಡಿಎಸ್​ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಬಂಗಾರಪೇಟೆ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಂಬೇಡ್ಕರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಗರದ ಬಸ್​ ನಿಲ್ದಾಣ ವೃತ್ತದ ನತಕ ಮೆರವಣಿಗೆ ತೆರಳಿ ರಸ್ತೆ ತಡೆದು, ಬೃಹತ್​ ಪ್ರತಿಭಟನೆ ನಡೆಸಿದರು.

ಮಾನವ ಸರಪಳಿ ನಿರ್ಮಿಸಿ ಸುಮಾರು 1 ಗಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಮಂಗಳಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಸದ ಎಂ.ಮಲ್ಲೇಶ್​ ಬಾಬು ಮಾತನಾಡಿ, ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಮುನ್ನ ಜನಕ್ಕೆ ನೀಡಿದ ಭರವಸೆಯಂತೆ ಅಧಿಕಾರ ನಡೆಸುತ್ತಿಲ್ಲ, ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ ಎಂದು ದೂರಿದರು.

ಅಹಿಂದ ಎನ್ನುವ ಸಿಎಂ ಸಿದ್ದರಾಮಯ್ಯ ಎಸ್ಸಿಪಿ-&ಟಿಎಸ್ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಖಂಡನೀಯ. ಅಲ್ಲದೆ ನಾವು ರೈತರ ಪರ ಎನ್ನುತ್ತಾರೆ ಆದರೆ ಹಾಲಿನ ಖರೀದಿ ದರ ಹೆಚ್ಚಿಸಿಲ್ಲ, ಸಹಾಯಧನವನ್ನೂ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ತೆರಿಗೆಗಳ ಹೆಚ್ಚಳ ಮಾಡ್ತಾರೆ. 57 ಸಾವಿರ ಕೋಟಿ ಗ್ಯಾರಂಟಿಗಳಿಗೆ ಮೀಸಲಿಟ್ಟು ಏನು ಮಾಡುತ್ತಿದ್ದಾರೆಯೋ ಗೊತ್ತಿಲ್ಲ. ಅನುದಾನ ಇಲ್ಲದೆ ಕಾಂಗ್ರೆಸ್​ ಶಾಸಕರೇ ಕಿತ್ತಾಡುತ್ತಿದ್ದಾರೆ. ಸಿಎಲ್​ 7 ಗಳಿಗೆ ಆದ್ಯತೆ ನೀಡಿದಷ್ಟು ಕುಡಿಯುವ ನೀರಿಗೆ ಒತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.

ಎಚ್​.ಡಿ.ಕುಮಾರಸ್ವಾಮಿ 14 ಹಾಗೂ 20 ತಿಂಗಳ ಅವಧಿಯಲ್ಲಿ ಯಾವ ರೀತಿ ಆಡಳಿತ ನಡೆಸಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಒಂದು ಅವಕಾಶ ಜೆಡಿಎಸ್​ಗೆ ಹಾಗೂ ಎಚ್​.ಡಿ.ಕುಮಾರಸ್ವಾಮಿಗೆ ನೀಡಿ ಎಂದು ಮನವಿ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್​ ಮಾತನಾಡಿ, ಕಾಂಗ್ರೆಸ್​ಗೆ ಮತ ನೀಡಿದವರಿಗೆ ಮೂಲ ಸೌಕರ್ಯ ಕಲ್ಪಿಸದೇ ಇರುವುದು ಯಾವ ನ್ಯಾಯ ?, ಸಂವಿಧಾನ ರಕ್ಷಣೆ ಮಾಡುತ್ತೇವೆ ಎನ್ನುತ್ತೀರಿ ಅದರ ಒಳಗಡೆ ಏನಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ ಮಾತನಾಡಿ, ವಿದ್ಯಾಭ್ಯಾಸ ಆರೋಗ್ಯ ರಸ್ತೆ ನೀರು ಸೇರಿ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರಗಳ ಜವಾಬ್ದಾರಿ. ಸರ್ಕಾರದ ಬಳಿ ಹಣ ಖಾಲಿಯಾಗಿದೆ. ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಖಾತೆಗಳಿಗೆ ಹಣ ಹಾಕುತ್ತಾರೆ, ಅವರನ್ನು ನಂಬಬೇಡಿ. ಗ್ಯಾರಂಟಿಗಳಲ್ಲಿ ಉಚಿತ ಬಸ್​ ಹೊರತುಪಡಿಸಿ ಯಾವುದನ್ನೂ ಸರಿಯಾಗಿ ನೀಡುತ್ತಿಲ್ಲ. ಜನರು ಎಚ್ಚೆತ್ತುಕೊಂಡು ಜಿಪಂ, ತಾಪಂ ಚುನಾವಣೆಯಲ್ಲಿ ಬುದ್ಧಿ ಕಲಿಸಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಕಾಂಗ್ರೆಸ್​ಗೆ ಮತ ನೀಡಿರುವ ಜನ ಈಗ ಪಶ್ಚಾತಾಪ ಪಡುವಂತಾಗಿದೆ. ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡಿರುವ ಸರ್ಕಾರಕ್ಕೆ ಜನಕ್ಕೆ ಮೂಲ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ರಸ್ತೆ, ಚರಂಡಿ ಸೇರಿ ಅಭಿವೃದ್ಧಿ ಕೆಲಸಗಳಿಗೆ ಕೋಟಿಗಟ್ಟಲೇ ಅನುದಾನ ಬಿಡುಗಡೆಯಾಗಿ ಎಂದು ಜಿಲ್ಲೆಯ ಕಾಂಗ್ರೆಸ್​ ಜನಪ್ರತಿನಿಧಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಇಲ್ಲಿ ಕೆಲಸ ನಡೆಯುತ್ತಿದೆ ಎಂದು ಸಾಭೀತುಪಡಿಸಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್​ ಕಾರ್ಯಾಧ್ಯಕ್ಷ ನಟರಾಜ್​, ಪಿಎಲ್​ ಡಿ ಬ್ಯಾಂಕ್​ ನಿರ್ದೇಶಕರಾದ ಮಂಜುನಾಥ್​, ಜಿ.ನರೇಶ್​ ಬಾಬು, ಮುಖಂಡರಾದ ಮಂಜುನಾಥ್​, ಖಾಜಿಕಲ್ಲಹಳ್ಳಿ ಹರೀಶ್​, ಕೆಇಬಿ ಚಂದ್ರು, ನಾರಾಯಣಸ್ವಾಮಿ, ಯಲುವಗುಳಿ ನಾಗರಾಜ್​, ನುಕ್ಕನಹಳ್ಳಿ ರಘುನಾಥ್​ ಅಮ್ಮನಲ್ಲೂರು ರಮೇಶ್​, ದಿಂಬ ನಾಗರಾಜಗೌಡ, ಚಂಬೆ ರಾಜೇಶ್​, ಬಲಿಜ ಸಂಘ ಅಶೋಕ್​, ಸತೀಶ್​, ವೀರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net