ಎಸ್‌ಸಿ ಒಳಮೀಸಲು; ಕಾಂಗ್ರೆಸ್ ಮೌನವೇಕೆ ?

Chalavaadi press meet
Published on

ಬೆಂಗಳೂರು: ಅಧಿಕಾರಕ್ಕೆ ಬಂದ ತಕ್ಷಣ ನಡೆಯುವ ಮೊದಲ ವಿಧಾನ ಮಂಡಲ ಅಧಿವೇಶನದಲ್ಲೇ ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲು ಕಲ್ಪಿಸುವ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದೇಕೆ ? ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆಯೊಂದಿಗೆ ಎಪಿಎಂಸಿ, ಭೂಸುಧಾರಣೆ, ಸಾರಿಗೆ, ಪಿಟಿಸಿಎಲ್ ತಿದ್ದುಪಡಿ ಮುಂತಾದ ಮಸೂದೆಗಳಿಗೆ ಅಂಗೀಕಾರ ಪಡೆದು, ಕಾಯ್ದೆ ಮಾಡಿದ್ದಾಯಿತು.

ಆದರೆ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣದ ಬಗ್ಗೆ ತುಟಿ ಬಿಚ್ಚಿಲ್ಲ. ದಲಿತರ ಬಗೆಗಿನ ಹುಸಿ ಪ್ರೀತಿ ಎದ್ದು ಕಾಣುತ್ತದೆ. ಹಿಂದಿನ ಬಿಜೆಪಿ ಬಿಜೆಪಿ ಸರ್ಕಾರ ಮಾಡಿದ ಮೀಸಲು ವರ್ಗೀಕರಣದ ಬಗ್ಗೆ ಸ್ಪೃಶ್ಯರನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಹಬ್ಬಿಸಿ ದಾರಿ ತಪ್ಪಿಸಲಾಯಿತು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ದಲಿತರ ಬಗ್ಗೆ ಹೊಂದಿರುವ ಕಾಳಜಿ ಬಗ್ಗೆ ಇನ್ನೊಂದು ಪುರಾವೆ ದೊರೆತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆಯಡಿ ಕಾದಿಟ್ಟ ಅನುದಾನ ಬೇರೆ ಯೋಜನೆಗಳಿಗೆ ಬಳಸುವುದಕ್ಕೆ ಬ್ರೇಕ್ ಹಾಕಿದ್ದೇವೆ, 7ಡಿ ಸೆಕ್ಷನ್‌ಗೆ ತಿದ್ದುಪಡಿ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದ ವೇಳೆ ಹೇಳಿದ್ದರು. ಆದರೆ, ಲಭ್ಯ ದಾಖಲಾತಿ ಪ್ರಕಾರ 11,033 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿ, ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ವೈಲ್ಯ, ನೀತಿ-ನಿರ್ಧಾರ, ಅಧಿಕಾರ ದುರ್ಬಳಕೆ ಪ್ರಶ್ನಿಸಿದ ಕಾರಣಕ್ಕೆ ಪಕ್ಷದ ಶಾಸಕರನ್ನು ವಿಧಾನಸಭೆ ಅಧಿವೇಶನದಿಂದ ಅಮಾನತು ಮಾಡಿಸಲಾಯಿತು. ದಲಿತ ಉಪಸಭಾಧ್ಯಕ್ಷ ಎಂದು ಬೇರೆ ಕಳಕಳಿ ವ್ಯಕ್ತಪಡಿಸಿದರು. ಸದನದಲ್ಲಿ ಹಿಂದೆ ಇಂತಹ ಘಟನೆಗಳಾಗಿದ್ದಿಲ್ಲವೆ ? ಎಂದು ಕೇಳಿದರು.

ಶಾಸಕ ಶಿವಲಿಂಗೇಗೌಡರು ಆಡಿದ ಮಾತುಗಳು ದಲಿತ ವಿರೋಧಿಯಲ್ಲವೆ? ದಲಿತರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಷ್ಟು ಕಾಳಜಿಯಿದ್ದರೆ ಮುಖ್ಯಮಂತ್ರಿ ಹುದ್ದೆ ದಲಿತರಿಗೆ ಬಿಟ್ಟುಕೊಡಬಹುದಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಕುಟುಕಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net