

ಬೆಂಗಳೂರು: ನಿಖರ ದತ್ತಾಂಶಗಳ ಆಧಾರದಲ್ಲಿ ಪರಿಶಿಷ್ಟ ಜಾತಿಗಳ ಮೀಸಲು ವರ್ಗೀಕರಣ ಉದ್ದೇಶಿತ ಸಮಗ್ರ ಸಮೀಕ್ಷೆ ಮತ್ತೆ ವಿಸ್ತರಣೆಯಾಗಿದೆ. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಅವಧಿ ಮೇ 29ರವರೆಗೆ ಅವಕಾಶ ಕಲ್ಪಿಸಲಾಗಿದೆ.
ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿ ಶಿಾರಸಿನ ಪ್ರಕಾರ ಸಮಗ್ರ ಸಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಆಯೋಗ ಗೊತ್ತುಪಡಿಸಿದ ವೇಳಾಪಟ್ಟಿ ಪ್ರಕಾರ ಮೇ 5ರಿಂದ ಗಣತಿದಾರರು ರಾಜ್ಯಾದ್ಯಂತ ಮನೆ, ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಅನೇಕ ಸಂಘ-ಸಂಸ್ಥೆಗಳ ಕೋರಿಕೆ ಮೇರೆಗೆ ಆಯೋಗವು ಮೊದಲ ಬಾರಿಗೆ ಮನೆ, ಮನೆಗೆ ಭೇಟಿ ಸಮೀಕ್ಷೆಯನ್ನು ಮೇ 25ರವರೆಗೆ ವಿಸ್ತರಿಸಿತ್ತು.
ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಎಸ್‌ಸಿ ಸಮೀಕ್ಷಾ ಕಾರ್ಯ ಇನ್ನೂ ಪ್ರಗತಿ ಸಾಧಿಸಬೇಕಾಗಿದೆ. ಮಳೆ/ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಎಸ್‌ಸಿ ಸಂಘಗಳು, ಬಿಬಿಎಂಪಿ ಕೋರಿಕೆಯಂತೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಅನುವಾಗುವಂತೆ ಅವಧಿ ವಿಸ್ತರಿಸಲಾಗಿದೆ.
ಮನೆ ಮನೆ ಭೇಟಿ ನೀಡಿ ಸಮೀಕ್ಷೆಯು ಮೇ 26 ರಿಂದ 29ರವರೆಗೆ ವಿಸ್ತರಿಸಲಾಗಿದೆ. ಆಯಾ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರ ಮೇ 30 ರಿಂದ ಜೂನ್ 1ರವರೆಗೆ ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಸ್ವಯಂ ೋಷಣೆ ಜೂ.1ರವರೆಗೆ ಮುಂದುವರಿಯಲಿದೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.