

ಬೆಂಗಳೂರು: ನೋಟು ಅಮಾನ್ಯೀಕರಣದಲ್ಲಿ ನಕಲಿ ದಾಖಲೆ ಪಡೆದು ನೋಟು ಬದಲಾಯಿಸಿದ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿ, ಎಲ್‌ಐಸಿ ಏಜೆಂಟ್‌ಗೆ 4 ವರ್ಷ ಜೈಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದೆ.
ಬಳ್ಳಾರಿ ಹೊಸಪೇಟೆ ಅಣೆಕಟ್ಟು ರಸ್ತೆಯ ಎಸ್‌ಬಿಐ ಶಾಖೆ ಹೆಡ್ ಕ್ಯಾಷಿಯರ್ ಎಸ್. ಗೋಪಾಲಕೃಷ್ಣ ಮತ್ತು ಎಲ್‌ಐಸಿ ಏಜೆಂಟ್ ಕೆ.ಎಸ್. ರಾಘವೇಂದ್ರ ಶಿಕ್ಷೆಗೆ ಗುರಿಯಾದವರು. 4 ವರ್ಷ ಜೈಲು, 3.70 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
2017ರ ಮಾ.30ರಂದು ಎಸ್‌ಬಿಐ ಹೆಡ್ ಕ್ಯಾಷಿಯರ್‌ಯಾಗಿ ಗೋಪಾಲಕೃಷ್ಣ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಎಲ್‌ಐಸಿ ಏಜೆಂಟ್ ರಾಘವೇಂದ್ರ, ಪಾಲಿಸಿದಾರರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳ 101 ಚೆಕ್‌ಗಳನ್ನು ಎಸ್‌ಬಿಐಗೆ ಕೊಟ್ಟು 2 ಸಾವಿರ ಮುಖಬೆಲೆಯ 2.10 ಲಕ್ಷ ರೂ. ಪಡೆದುಕೊಂಡಿದ್ದ.
ಕೇಂದ್ರ ಸರ್ಕಾರದ ಸುತ್ತೋಲೆ ಉಲ್ಲಂಘನೆ ಮಾಡಿ ಕ್ಯಾಷಿಯರ್, ಎಲ್‌ಐಸಿ ಏಜೆಂಟ್‌ಗೆ ಅನುಕೂಲ ಮಾಡಿಕೊಟ್ಟಿದ್ದರು. ಪಾಲಿಸಿದಾರರ ಹೆಸರಿನಲ್ಲಿ ಚೆಕ್ ಕೊಟ್ಟಿದ್ದರೂ ಅವರ ಹೆಸರಿನಲ್ಲಿ ಪಾಲಿಸಿಯೇ ತೆರೆದಿರಲಿಲ್ಲ. ಇದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಸಿಬಿಐ ಅಧಿಕಾರಿಗಳು, ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.