ಬಾರ್ಬಿ ಬೊಂಬೆ ಆಯ್ತು, ಇದೀಗ ಬಂತು 'ಹಿಜಾರ್ಬಿ' ಬೊಂಬೆ…!

converted hijarbie
Published on

ಇತ್ತೀಚಿನ ಹಾಲಿವುಡ್ ಚಿತ್ರ ಬಾರ್ಬಿ ಭಾರಿ ಯಶಸ್ಸನ್ನು ಗಳಿಸಿದೆ ಜೊತೆಗೆ ಗಲ್ಲಾಪೆಟ್ಟಿಗೆಯನ್ನೂ ಭರಿಸುವಲ್ಲಿ ಯಶಸ್ವಿಯಾಗಿದೆ. ಪಿಂಕ್​​ ಟ್ರೆಂಡ್​​ ಜೊತೆಗೆ ಬಾರ್ಬಿ ರೀತಿಯೇ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮತ್ತು ಟಿಕ್​ ಟಾಕ್​ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಬಾರ್ಬಿ ಬೊಂಬೆ ಅಂದ್ರೆ ಪಿಂಕ್​ ಡ್ರೆಸ್​​, ಕ್ಲಿಪ್​, ಉದ್ದನೆಯ ಹೇರ್​​ ಸ್ಟೈಲ್​ ಜೊತೆಗೆ ಕ್ಯೂಟ್​​ ಡ್ರೆಸ್ಡ್​​ ಬೊಂಬೆ ಅನ್ನೋದು ಅನಿಸಿಕೆ ಹಾಗೂ ಆ ಬೊಂಬೆ ಇರೋದು ಕೂಡಾ ಹಾಗೆ.


ಇದೀಗ ಹೊಸದಾಗಿ ಬಂದಿರುವ 'ಹಿಜಾರ್ಬಿ' ಇದಕ್ಕೆ ತದ್ವಿರುದ್ಧವಾಗಿದ್ದು ಈ ಬೊಂಬೆ ಹಿಜಾಬ್​ ಧರಿಸಿರೋದ್ರಿಂದ ಬೊಂಬೆಗೆ ಹಿಜಾರ್ಬಿ ಎಂದು ಹೆಸರಿಡಲಾಗಿದೆ. ಬಾರ್ಬಿ ಅಂದ್ರೆ ಹೀಗೆ ಇರಬೇಕು ಅಂದುಕೊಂಡವರು ಹಿಜಾರ್ಬಿಯನ್ನ ಕಂಡು ಅಚ್ಚರ ವ್ಯಕ್ತಪಡಿಸಿದ್ದಾರೆ. ಈ ಬೊಂಬೆ ತಯಾರಿಸಿದ ಮಹಿಳೆ ಯಾರು ಗೊತ್ತಾ?

ಬೊಂಬೆ ತಯಾರಿಸಿದ್ದು ಈ ಮಹಿಳೆ
ನೈಜೀರಿಯಾದ ಕಲಾವಿದೆ, ಹನೀಫಾ ಆಡಮ್, ಬಾರ್ಬಿ ಬೊಂಬೆಯನ್ನ ರೀ-ಲಾಂಚ್​​ ಮಾಡಿದ್ದಾಳೆ. ಮಹಿಳೆಯರು ಯಾವಬ ರೀತಿ ಬುರ್ಖಾ ಮತ್ತು ಹಿಜಾಬ್​ ಧರಿಸುತ್ತಾರೆಯೋ ಅದೇ ರೀತಿ ಈ 'ಹಿಜಾರ್ಬಿ' ಬೊಂಬೆಗೆ ಹಿಜಾಬ್​ ಮತ್ತು ಬಟ್ಟೆಯನ್ನ ವಿನ್ಯಾಸಗೊಳಿಸಲಾಗಿದೆ. ಹಿಜಾಬ್​​ ಮತ್ತು ಸಾಧಾರಣ ಉಡುಗೆಯನ್ನ ಧರಿಸಿದ್ದರಿಂದ ಈ ಬೊಂಬೆಯನ್ನ ಈಕೆ ಹಿಜಾರ್ಬಿ ಎಂದು ಕರೆದಿದ್ದಾಳೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದೆ.


ನೆಟ್ಟಿಗರೊಂದಿಗೆ ಈ ಫೋಟೋ ಹಂಚಿಕೊಂಡ ನೈಜೀರಿಯಾದ ಕಲಾವಿದೆ, ಹನೀಫಾ ಆಡಮ್, 'ಹಿಜಾರ್ಬಿ ಇಸ್​ ಬ್ಯಾಕ್​​' ಎಂದು ಪೋಸ್ಟ್​​ ಜೊತೆಗೆ ಬರೆದಿದ್ದಾರೆ. ಈಕೆ ಈ ಹಿಂದೆ 2015ರಲ್ಲಿ ಹಿಜಾರ್ಬಿ ಬೊಂಬೆಯ ಫೋಟೋವೊಂದನ್ನ ಹಂಚಿಕೊಂಡಿದ್ದರೂ ಆ ಫೋಟೋ ಜನ ಮನ್ನಣೆಯನ್ನ ಗಳಿಸಿರಲಿಲ್ಲ. ತದನಂತರದಲ್ಲಿ ಈಕೆ ಹಿಜಾರ್ಬಿ ಬೊಂಬೆಗೆ ತಾನೇ ತಯಾರಿಸಿದ ಮ್ಯಾಕ್ಸಿ ಶರ್ಟ್, ಬ್ಲೌಸ್ ಮತ್ತು ಕಪ್ಪು ಹಿಜಾಬ್ ಅನ್ನು ಹೊಲಿಯುವ ಕೆಲಸ ಮಾಡಿದ್ದು, ಇದೀಗ ಮತ್ತೆ ಹಿಜಾರ್ಬಿ ಫೋಟೋವನ್ನ ಹಂಚಿಕೊಂಡಿದ್ದಾಳೆ.


ಹಿಜಾರ್ಬಿಯ ಅವಶ್ಯಕತೆ ಏನು?
ಹಿಜಾರ್ಬಿ ಬೊಂಬೆ ತಯಾರಿಸಲು ಆಕೆಗೆ ಪ್ರೇರೇಪಿಸಿದ ವಿಚಾರದ ಬಗ್ಗೆ ವಿವರಿಸಿರುವ ಹನೀಫಾ, 'ನನ್ನಂತೆ ಕಾಣುವ ಗೊಂಬೆಯನ್ನು ನಾನು ನೋಡಿರಲಿಲ್ಲ'. ಈ ರೀತಿಯ ಬೊಂಬೆ ತಯಾರಿಸಿರೋದು ನನಗೆ ಖುಷಿ ತಂದಿದೆ. 'ಹಿಜಾರ್ಬಿ' ಬೊಂಬೆಗಾಗಿ ಸುಮಾರು 70 ಬಟ್ಟೆಗಳನ್ನು ವಿನ್ಯಾಸಗೊಳಿಸಿರುವ ಈಕೆ ನಾನು ನನ್ನ ಕೆಲಸದಲ್ಲಿ ನನ್ನ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಬಾರ್ಬಿ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾನು ಈ ಸಮಯದಲ್ಲಿ ಹಿಜಾರ್ಬಿಯನ್ನ ಪರಿಚಯಿಸಿರುವುದು ಮತ್ತಷ್ಟು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net