ಜೀವದ ಹಂಗು ತೊರೆದು 174 ಜನರ ರಕ್ಷಣೆ; ಸ್ಮಿತ್ ಧೈರ್ಯಕ್ಕೆ ಶಾರುಖ್ ಸಲಾಂ​! | Shah Rukh Khan

ಸಹಪೈಲಟ್‌ನಿಂದ ಇರಿತಕ್ಕೊಳಗಾದರೂ 174 ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿ ಬಾಲಿವುಡ್ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Shah Rukh Khan
ಕ್ಯಾಪ್ಟನ್ ಸ್ಮಿತ್‌ಗೆ ಶಾರುಖ್ ಮೆಚ್ಚುಗೆ
Published on: 

Captain Smith Machar: ಸಹಪೈಲಟ್‌ನಿಂದ ವಿಮಾನದೊಳಗೇ ಇರಿತಕ್ಕೊಳಗಾದರೂ, ಗಂಭೀರ ಗಾಯಗಳ ನಡುವೆಯೇ 174 ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್ ಎಕ್ಸ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಗಾಯಗೊಂಡಿದ್ದರೂ ಸ್ವಂತ ಸುರಕ್ಷತೆಯ ಬಗ್ಗೆ ಯೋಚಿಸದೆ ಪ್ರಯಾಣಿಕರ ರಕ್ಷಣೆಗೆ ಮುಂದಾದ ಅವರ ಕರ್ತವ್ಯನಿಷ್ಠೆಯನ್ನು ಮೆಚ್ಚಿರುವ ಶಾರುಖ್, “ಇದು ನಿಜವಾದ ಧೈರ್ಯ. ನೀವು ಶೀಘ್ರ ಚೇತರಿಸಿಕೊಳ್ಳಲಿ. ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿದೆ” ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಅವರಿಗಿಂತ ಒಂದು ದಿನ ಮುನ್ನ ಸಲ್ಮಾನ್ ಖಾನ್ ಕೂಡ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಕೊಂಡಾಡಿದ್ದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಲ್ಮಾನ್, “ಪೈಲಟ್‌ಜೀ, ನೀವು ಅದ್ಭುತವಾಗಿ ಕಾರ್ಯನಿರ್ವಹಿಸಿದ್ದೀರಿ. ನಾವೆಲ್ಲರೂ ನಿಮಗೆ ಸಲಾಂ ಮಾಡುತ್ತೇವೆ. ವೆಲ್ ಡನ್ ಬ್ರೋ, ಕ್ಯಾಪ್ಟನ್ ಸ್ಮಿತ್ ಮಚ್ಚರ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಣವೀರ್ ಸಿಂಗ್, ಕರಣ್ ಜೋಹರ್ ಸೇರಿ ಹಲವರಿಂದ ಪ್ರಶಂಸೆ

ಶಾರುಖ್ ಮತ್ತು ಸಲ್ಮಾನ್ ಬಳಿಕ ಕರಣ್ ಜೋಹರ್, ರಣವೀರ್ ಸಿಂಗ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕರಣ್ ಜೋಹರ್ ಅವರು ಸ್ಮಿತ್ ಮಚ್ಚರ್ ಅವರ ನಿಸ್ವಾರ್ಥ ಧೈರ್ಯವನ್ನು ಕೊಂಡಾಡಿದ್ದು, ಅವರ ಸಾಹಸಮಯ ಮನೋಭಾವ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.

ವಿಮಾನದಲ್ಲಿ ಆಗಿದ್ದೇನು?

174 ಪ್ರಯಾಣಿಕರಿದ್ದ ಫ್ಲೈದುಬೈ ಎಫ್‌ಜೆಡ್ 1073 ವಿಮಾನ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿತ್ತು. ಸೆಪ್ಟೆಂಬರ್ 30ರಂದು ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಸಹಪೈಲಟ್ ಕಾಕ್‌ಪಿಟ್‌ನಲ್ಲೇ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿ ಇರಿದಿದ್ದಾನೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆದಿದ್ದಾರೆ. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಗಿದೆ. ನಂತರ ಇತರ ಇಬ್ಬರು ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು ತಬೂಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.

ಗಾಯಗೊಂಡ ಸ್ಥಿತಿಯಲ್ಲೇ ಪ್ರಧಾನಿಗೆ ಮಾಹಿತಿ

ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದ್ದಾರೆ. ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆದಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ತಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net