ಅತಿಕ್ರಮಣವೆಂಬುದು ಪರಿಸರಕ್ಕೆ ದೊಡ್ಡ ಆಪತ್ತು; ಇನ್ನಾದರೂ ಕೆರೆಗಳನ್ನು ರಕ್ಷಿಸಿ

Lake 14 JAN 20
Published on

ಕೆರೆಗಳ ಕಣ್ಮರೆ, ಅತಿಕ್ರಮಣ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿ ಮಾತ್ರವಲ್ಲ ಪರಿಸರದ ನಿಟ್ಟಿನಲ್ಲಿ ಅಷ್ಟೇ ದೊಡ್ಡ ಆಪತ್ತಾಗಿ ಕಾಡುತ್ತಿದೆ. ಹಿಂದೆ ಕೆರೆ-ಕಟ್ಟೆಗಳನ್ನು ನಿರ್ವಿುಸುವುದು ಆಡಳಿತಗಾರರ ಆದ್ಯತೆಯಾಗಿರುತ್ತಿತ್ತು, ಅದುವೇ ಸಮೃದ್ಧಿಯ ಪ್ರತೀಕವಾಗಿರುತ್ತಿತ್ತು. ರಾಜಾಡಳಿತದ ಸಮಯದಲ್ಲೆಲ್ಲ ಅರಸ ಎಷ್ಟು ಕೆರೆಗಳನ್ನು ನಿರ್ವಿುಸಿದ್ದಾನೆ ಎಂಬುದರ ಆಧಾರದ ಮೇಲೆ ಆತ ಜನಾನುರಾಗಿ ಹೌದೋ, ಅಲ್ಲವೋ ಎಂಬುದು ನಿರ್ಧಾರವಾಗುತ್ತಿತ್ತು. ಹಾಗಾಗಿಯೇ, ಹಿಂದಿನವರು ಕೆರೆಗಳ ನಿರ್ಮಾಣ ಮತ್ತು ಅವುಗಳ ರಕ್ಷಣೆಗೆ ಪ್ರಧಾನ ಆದ್ಯತೆ ನೀಡಿದ್ದರು. ಕೆರೆಗಳನ್ನು ಕಟ್ಟುವ ಮೂಲಕ ಅಂತರ್ಜಲ ಹೆಚ್ಚಳವಾಗುವಂತೆ ನೋಡಿಕೊಂಡರು. ಇತ್ತೀಚಿನ ದಶಕಗಳಲ್ಲಿ ಭೌತಿಕ ಅಭಿವೃದ್ಧಿಯ ಭರಾಟೆಯಲ್ಲಿ ಪರಿಸರದ ಹಿತವನ್ನು ಕಡೆಗಣಿಸಲಾಗುತ್ತಿದ್ದು, ಕೆರೆಗಳಿಗೂ ದುಸ್ಥಿತಿ ಬಂದೊದಗಿದೆ ಎಂಬುದು ಕಳವಳದ ವಿಷಯ.

ಈ ಹಿಂದೆ ಬೆಂಗಳೂರಿನ ಕೆರೆಗಳ ಸಂರಕ್ಷಣೆ, ಪುನಶ್ಚೇತನಕ್ಕೆ ಆದೇಶ ಹೊರಡಿಸಿದ್ದ ಹೈಕೋರ್ಟ್, ಇದೀಗ ರಾಜ್ಯಾದ್ಯಂತ ಕೆರೆಗಳ ಸಂರಕ್ಷಣೆಗೆ ಮುಂದಾಗಿರುವುದು ಸಮಾಧಾನಕರ. ಹಾಗಾಗಿಯೇ, ರಾಜ್ಯದಲ್ಲಿರುವ ಕೆರೆಗಳು ಮತ್ತದರ ಸ್ಥಿತಿಗತಿ ಕುರಿತು ಸಮಗ್ರ ವಿವರ ಒದಗಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ರಾಜ್ಯದಲ್ಲಿ ಎಷ್ಟು ಕೆರೆಗಳಿವೆ ಎಂದು ಸಮೀಕ್ಷೆ ನಡೆಸಲಾಗಿದೆಯೇ? ಆ ಕೆರೆಗಳ ಪೈಕಿ ಎಷ್ಟು ಒತ್ತುವರಿಯಾಗಿವೆ? ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳೇನು? ಈ ಎಲ್ಲ ಮಾಹಿತಿ ಒಳಗೊಂಡ ಸಮಗ್ರ ವಿವರವನ್ನು ಸರ್ಕಾರ ಫೆಬ್ರವರಿ 14ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಹಾಗಾಗಿ, ಇನ್ನಾದರೂ ಸರ್ಕಾರದ ಗಮನ ಕೆರೆಗಳತ್ತ ಹೊರಳಲಿದೆಯೇ ಎಂಬುದು ಕುತೂಹಲಕರ. ಬೆಂಗಳೂರಿನಲ್ಲಂತೂ ಅತಿಕ್ರಮಣಗೊಂಡಿರುವ ಕೆರೆಗಳ ಬಗ್ಗೆ ನಿಖರ ಲೆಕ್ಕವಿಲ್ಲ. ಇನ್ನು, ಉಳಿದಿರುವ ಕೆರೆಗಳಾದರೂ ಸುಸ್ಥಿತಿಯಲ್ಲಿ ಇವೆಯೇ? ಎಂದು ಅವಲೋಕಿಸಿದರೆ ಸಿಗುವುದು ನಿರಾಶಾದಾಯಕ ಉತ್ತರವೇ. ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವೆಡೆ ಕೆರೆಗಳು ಹೂಳಿನಿಂದ ತುಂಬಿದ್ದು, ಅವಸಾನದ ಅಂಚಿಗೆ ತಲುಪಿವೆ. ಮತ್ತೆ ಕೆಲವಡೆ, ತ್ಯಾಜ್ಯವೇ ತುಂಬಿ ಹೋಗಿ ಕೆರೆಯ ಅಸ್ತಿತ್ವವನ್ನೇ ಹುಡುಕಾಡುವಂಥ ಸ್ಥಿತಿ. ಈ ಬಗ್ಗೆ ಮಾಧ್ಯಮಗಳು ಆಗಾಗ ಬೆಳಕು ಚೆಲ್ಲುತ್ತ ಬಂದರೂ, ನಿಖರವಾದ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿರಲಿಲ್ಲ. ಅಷ್ಟಕ್ಕೂ, ಕೆರೆಗಳು ಆಯಾ ಊರಿನ ಜೀವಸೆಲೆಗಳು. ಅವು ಅಂತರ್ಜಲವನ್ನು ಹೆಚ್ಚಿಸುತ್ತವೆ, ಸಾವಿರಾರು ಜನರ ನೀರಿನ ಅಗತ್ಯವನ್ನು ನೀಗಿಸುತ್ತವೆ. ಅವುಗಳನ್ನು ಜತನದಿಂದ ಕಾಯ್ದುಕೊಳ್ಳಬೇಕಾದ್ದು ಮಾನವಕುಲದ ಆದ್ಯಕರ್ತವ್ಯ. ಏಕೆಂದರೆ, ಕೆರೆ ಮತ್ತು ಇತರೆ ಜಲಮೂಲಗಳು ಮನುಕುಲಕ್ಕೆ ಅಗಾಧ ಉಪಕಾರ ಮಾಡುತ್ತಿವೆ. ಆಧುನಿಕತೆಯ ಓಟದಲ್ಲಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ ಅದರಿಂದ ನಷ್ಟ ನಮಗೇ ಎಂಬುದನ್ನು ಮರೆಯುವಂತಿಲ್ಲ.

ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ 2008ರಲ್ಲಿ ದಾಖಲಾಗಿದ್ದ ಪ್ರಕರಣದ ಸಂಬಂಧ ಆದೇಶ ಪಾಲಿಸದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಏಕೆ ಜರುಗಿಸಬಾರದು ಎಂದೂ ಪ್ರಶ್ನಿಸಿದೆ. ಕಳೆದ ಕೆಲ ದಶಕಗಳಲ್ಲೇ ತುಂಬ ಕೆರೆಗಳನ್ನು ಕಳೆದುಕೊಂಡಿದ್ದೇವೆ ಎಂಬುದು ಕಟುಸತ್ಯ. ಈಗ ಅಳಿದುಳಿದಿರುವ ಕೆರೆಗಳನ್ನಾದರೂ ಉಳಿಸಿಕೊಳ್ಳಬೇಕು, ಅವುಗಳ ಪುನಶ್ಚೇತನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಜನಾಗ್ರಹ ಮತ್ತು ನ್ಯಾಯಾಲಯದ ಕಳಕಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net