ಸವಣೂರ ತಹಸೀಲ್ದಾರ್​ ಕಚೇರಿಗೆ ಡಿಸಿ ಭೇಟಿ, ಪರಿಶೀಲನೆ

19-RNR-03
Published on

ಹಾವೇರಿ: ಸವಣೂರ ತಹಸೀಲ್ದಾರ್​ ಕಚೇರಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಮಯದಲ್ಲಿ ತಹಸೀಲ್ದಾರ್​ ಕಚೇರಿ ಎದುರು ಶಿರಬಡಗಿ ಗ್ರಾಮಸ್ಥರು 2021&-22ನೇ ಸಾಲಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ಹೊಸ ಕಟ್ಟಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಈಗ ಅವುಗಳು ಬ್ಲಾಕ್​ ಆಗಿದ್ದು ಹಾಗೂ ಆರಂಭಿಕ ಹಂತದ ಅನುದಾನ ಈವರೆಗೂ ಬಿಡುಗಡೆ ಆಗಿರುವುದಿಲ್ಲ ಧರಣಿ ನಡೆಸುತ್ತಿದ್ದರು.

ಅವರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಶ್ರೀವಾಗಿ ಸಮಸ್ಯೆ ಇತ್ಯರ್ಥಪಡಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ನಂತರ ತಹಸೀಲ್ದಾರ್​ ಕಚೇರಿ ಪರಿಶೀಲಿಸಿ, ಭೂ ಸುರಕ್ಷಾ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯ ಪ್ರಗತಿ ಪರಿಶೀಲನೆ ನಡೆಸಿದರು. ನಿಗಧಿತ ಅವಧಿಯೊಳಗೆ ಗುರಿ ಸಾಧನೆಮಾಡಬೇಕು. ಕಚೇರಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಅನಗತ್ಯ ವಿಳಂಬ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಸಾರ್ವಜನಿಕರು ಪದೆ ಪದೆ ಕಚೇರಿಗೆ ಬರುವಂತಾಗಬಾರದು ಹಾಗೂ ಸಾರ್ವಜನಿಕ ಕುಂದು ಕೊರತೆ ಅಜಿರ್ಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net