

ಶಿವಮೊಗ್ಗ: ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲೇ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿ 1979ರಲ್ಲಿ ಲೋಕಸೇವಾ ಆಯೋಗದ ಕಚೇರಿ ಎದುರು ಹೋರಾಟ ಮಾಡಿದವರಲ್ಲಿ ಮೊದಲಿಗರು ಕಲ್ಲೂರು ಮೇಘರಾಜ್ ಎಂದು ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ತಿಳಿಸಿದರು.
ಗಾಂಧಿ ಪಾರ್ಕ್‌ನಲ್ಲಿ ಸೋಮವಾರ ಕಲ್ಲೂರು ಮೇಘರಾಜ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲ್ಲೂರು ಮೇಘರಾಜ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿರಲಿಲ್ಲ. ಇದಕ್ಕೆ ಹೋರಾಟ ರೂಪಿಸಿದವರಲ್ಲಿ ಕಲ್ಲೂರು ಮೇಘರಾಜ್ ಕೂಡಾ ಒಬ್ಬರು ಎಂದು ಹೇಳಿದರು.
ಸಾಹಿತಿಗಳಾದ ದೇ.ಜವರೇಗೌಡ, ಸಿದ್ದಯ್ಯ ಪುರಾಣಿಕ್, ಪ್ರೊ.ಜಿ.ರಾಮಕೃಷ್ಣ, ಡಾ.ಚಿದಾನಂದ ಮೂರ್ತಿ ಮುಂತಾದವರೊಂದಿಗೆ ಕನ್ನಡ ಸಂಘರ್ಷ ಸಮಿತಿಯ ಅಂದಿನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕಲ್ಲೂರು ಮೇಘರಾಜ್ ಉಪವಾಸ ಸತ್ಯಾಗ್ರಹ ಮಾಡಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಆಗ್ರಹಿಸಿದ್ದರು.
ಇದಕ್ಕೆ ಮಣಿದ ಅಂದಿನ ಸಿಎಂ ದೇವರಾಜ ಅರಸ್ ಅವರು ರಾಜ್ಯದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ಸರ್ಕಾರದ ಆದೇಶದ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ ಮೂಲಕ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿಸಿದ್ದರು. ಈ ಸತ್ಯಾಗ್ರಹದ 44ನೇ ವರ್ಷದ ನೆನಪಿನ ಹಾಗೂ ಸಾಧನೆಯ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಿ ಕಲ್ಲೂರು ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಕೃಷ್ಣಪ್ಪ, ಶೇಖರ ಗೌಳೇರ್, ಶಂಕ್ರಾ ನಾಯ್ಕ, ರಾಮಚಂದ್ರ, ಪಡವಳ್ಳಿ ಹರ್ಷೇಂದ್ರಕುಮಾರ್, ಮಂಜುನಾಥ ಪಾಟೀಲ್, ಈರಪ್ಪ, ಸುವರ್ಣಾ ನಾಗರಾಜ್, ಜಿ.ವಿ.ಮಂಜುಳಾ, ಪುರದಾಳ್ ನಾಗರಾಜ್, ನರಸಿಂಹ ಮೂರ್ತಿ, ಆದಿಶೇಷ ಮತ್ತಿತರರಿದ್ದರು.